ಬೆಂಗಳೂರು: ಯಲಹಂಕದ ವಾಯುನೆಲೆಯ ಆಗಸದಲ್ಲಿ ಶುಕ್ರವಾರ ಸಂಜೆ ಸೂರ್ಯ ಕಿರಣ್ ವಿಮಾನಗಳು ಪ್ರೀತಿಯ ಸಂಕೇತವಾದ ಹೃದಯದ ಚಿತ್ರಮೂಡಿಸಿ ಮರೆಯಾಗುತ್ತಿದ್ದಂತೆ ‘ಏರೊ ಇಂಡಿಯಾ 2025’ ವೈಮಾನಿಕ ಪ್ರದರ್ಶನಕ್ಕೆ ತೆರೆ ಬಿತ್ತು.
ಐದು ದಿನಗಳು ದೇಶ, ವಿದೇಶಗಳ ವಿಮಾನ ತಂಡಗಳು ನಡೆಸಿಕೊಟ್ಟ ಸಾಹಸ ಪ್ರದರ್ಶನ, ವೈಮಾನಿಕ ಪ್ರದರ್ಶನಕ್ಕೆ ವಿಶೇಷ ಮೆರುಗು ತಂದುಕೊಟ್ಟಿತ್ತು. ಕೊನೆಯ ದಿನ ಒಂದೂವರೆ ಲಕ್ಷ ಮಂದಿ ಪ್ರದರ್ಶನವನ್ನು ಕಣ್ತುಂಬಿಕೊಂಡರು. ಐದು ದಿನಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಜನರು ಪ್ರದರ್ಶನವನ್ನು ವೀಕ್ಷಿಸಿದ್ದಾರೆ.
ಯಲಹಂಕದ ಬಾನಿನಲ್ಲಿ ಲೋಹದ ಹಕ್ಕಿಗಳ ಕಲರವ ನೋಡಲು 2027ರವರೆಗೂ ಕಾಯಬೇಕು. ಈ ಮೂಲಕ ವರ್ಷದ ಬಹುದೊಡ್ಡ ವೈಮಾನಿಕ ಜಾತ್ರೆ ಏರೊ ಇಂಡಿಯಾ ಪ್ರದರ್ಶನ ಮುಕ್ತಾಯಗೊಂಡಿತು.
ವೈಮಾನಿಕ ಪ್ರದರ್ಶನದ 15ನೇ ಆವೃತ್ತಿಗೆ ಫೆಬ್ರುವರಿ 10ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದರು. ಮೊದಲ ಮೂರು ದಿನ ವಿವಿಧ ದೇಶಗಳ ರಕ್ಷಣಾ ಸಚಿವರು ಮತ್ತು ಅಧಿಕಾರಿಗಳ ಸಭೆ, ಉದ್ಯಮಿಗಳ ಜೊತೆ ಮಾತುಕತೆ, ವಿಚಾರ ಸಂಕಿರಣ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಹೂಡಿಕೆ ಆಕರ್ಷಿಸುವುದಕ್ಕೆ ಪೂರಕವಾದ ಸಭೆಗಳಿಗೆ ಸೀಮಿತವಾಗಿತ್ತು.
ವಿಮಾನಯಾನ ಹಾಗೂ ರಕ್ಷಣಾ ಕ್ಷೇತ್ರದ ದಿಗ್ಗಜರಾದ ಅಮೆರಿಕ, ರಷ್ಯಾ, ಫ್ರಾನ್ಸ್, ಇಸ್ರೇಲ್ ಸೇರಿದಂತೆ 27 ದೇಶಗಳು ಪಾಲ್ಗೊಂಡಿದ್ದವು. 98 ದೇಶಗಳ ಪ್ರತಿನಿಧಿಗಳು 700 ಮಳಿಗೆಗಳನ್ನು ತೆರೆದಿದ್ದರು.
ಸುಡು ಬಿಸಿಲು ಲೆಕ್ಕಿಸದೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ವೀಕ್ಷಣಾ ಆವರಣ ಸಂಪೂರ್ಣ ಭರ್ತಿಯಾಗಿತ್ತು. ಮಕ್ಕಳು, ಯುವಜನರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರು ಪ್ರದರ್ಶನಕ್ಕೆ ಬಂದಿದ್ದರು. ಬೆಳಿಗ್ಗೆ ಪ್ರದರ್ಶನ ವೀಕ್ಷಿಸಿದವರ ಪೈಕಿ ಬಹಳಷ್ಟು ಮಂದಿ ವಾಪಸ್ ಮನೆಗಳಿಗೆ ಹೋಗಲಿಲ್ಲ. ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಮತ್ತೆ ವಿಮಾನ ಹಾರಾಟ ನೋಡಲು ಜಮಾಯಿಸಿದ್ದರು. ಮಧ್ಯಾಹ್ನದ ಪ್ರದರ್ಶನ ವೀಕ್ಷಿಸಲು ಮತ್ತಷ್ಟು ಜನರು ಬಂದರು.
ಸುಖೋಯ್–30 ಎಂಕೆ1, ತೇಜಸ್, ಎಫ್ –16, ಎಸ್‌ಯು–57 ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ವಿಮಾನಗಳು ನಡೆಸಿದ ಕಸರತ್ತು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದವು. ಜನರ ಆಕರ್ಷಣೆಯ ಕೇಂದ್ರ ಬಿಂದು ಸೂರ್ಯ ಕಿರಣ್ ತಂಡದ ಒಂಬತ್ತು ವಿಮಾನಗಳು ಹಾರಿ ಬಂದು ಬಾನಂಗಳದಲ್ಲಿ ಬಿಡಿಸಿದ ಚಿತ್ತಾರಗಳು ನೆರೆದಿದ್ದವರ ಮನಸೂರೆಗೊಳಿಸಿದವು.
ಇನ್ನೇನು ನೆಲಕ್ಕೆ ಅಪ್ಪಳಿಸಿತು ಎನ್ನುವಷ್ಟರಲ್ಲಿ ಆಕಾಶದತ್ತ ಜಿಗಿದು ಹೊರಟ ಯುದ್ದ ವಿಮಾನ, ಕಣ್ಮುಚ್ಚಿ ಬಿಡುವಷ್ಟರಲ್ಲಿ ಮತ್ತೆ ಅದೇ ವೇಗದಲ್ಲಿ ಬಂದು ಆಕಾಶದಲ್ಲಿ ಪಲ್ಟಿ ಹೊಡೆಯುತ್ತಿತ್ತು. ವಿರುದ್ಧ ದಿಕ್ಕಿನಲ್ಲಿ ಬಂದ ಯುದ್ದ ವಿಮಾನಗಳು ಇನ್ನೇನು ಡಿಕ್ಕಿ ಹೊಡೆದುಕೊಂಡವು ಎನ್ನುವಷ್ಟರಲ್ಲಿ ಬಾಗಿ ತಪ್ಪಿಸಿಕೊಂಡು ಮುಂದೆ ಸಾಗಿದವು.
ಈ ವಿಮಾನಗಳ ಕಸರತ್ತು ಕಂಡು ಮಕ್ಕಳು, ಹಿರಿಯರು ಕುಣಿದು ಕುಪ್ಪಳಿಸಿದರು. ಲೋಹದ ಹಕ್ಕಿಗಳ ಕಲರವ ಮೆಲುಕು ಹಾಕುತ್ತ ಮನೆಯತ್ತ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.