ADVERTISEMENT

ಶ್ರೀಗಳ ಸಮ್ಮುಖದಲ್ಲೇ ನಾಯಕರ ಜಗಳ!

ಆರ್‌.ಅಶೋಕ್‌ ಕಾಲೆಳೆದ ವಿ. ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 19:43 IST
Last Updated 17 ಮಾರ್ಚ್ 2019, 19:43 IST
ಸುತ್ತೂರು ಶ್ರೀಗಳಿಂದ ಆರ್‌.ಅಶೋಕ್‌, ತೇಜಸ್ವಿನಿ ಅನಂತ ಕುಮಾರ್‌ ಹಾಗೂ ವಿ.ಸೋಮಣ್ಣ ಆಶೀರ್ವಾದ ಪಡೆದರು
ಸುತ್ತೂರು ಶ್ರೀಗಳಿಂದ ಆರ್‌.ಅಶೋಕ್‌, ತೇಜಸ್ವಿನಿ ಅನಂತ ಕುಮಾರ್‌ ಹಾಗೂ ವಿ.ಸೋಮಣ್ಣ ಆಶೀರ್ವಾದ ಪಡೆದರು   

ಬೆಂಗಳೂರು: ಸುತ್ತೂರು ಮಠದ ಶಿವರಾತ್ರಿಶ್ವರ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲೇ ಬಿಜೆಪಿ ಶಾಸಕ ವಿ.ಸೋಮಣ್ಣ ಅವರು ಶಾಸಕ ಆರ್.ಅಶೋಕ್‌ ಕಾಲೆಳೆದ ಪ್ರಸಂಗ ಭಾನುವಾರ ಜರುಗಿತು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ತೇಜಸ್ವಿನಿ ಅನಂತ ಕುಮಾರ್‌, ಅಶೋಕ್‌, ವಿ.ಸೋಮಣ್ಣ ಹಾಗೂ ಮುಖಂಡರು ಸುತ್ತೂರು ಸ್ವಾಮೀಜಿ ಅವರ ಭೇಟಿಗೆ ತೆರಳಿದ್ದ ವೇಳೆ ಈ ವಿದ್ಯಮಾನ ನಡೆಯಿತು.

‘ಲೋಕಸಭಾ ಚುನಾವಣೆಯನ್ನು ಅಶೋಕ್ ಚಕ್ರವರ್ತಿ ನೇತೃತ್ವದಲ್ಲೇ ಎದುರಿಸುತ್ತೇವೆ. ಅವರು ದೊಡ್ಡ ನಾಯಕ. ಆದರೆ, ಧೈರ್ಯ ಸ್ವಲ್ಪ ಕಡಿಮೆ’ ಎಂದು ಸೋಮಣ್ಣ ವ್ಯಂಗ್ಯವಾಗಿ ಹೇಳಿದರು.

ADVERTISEMENT

ಆಗ ಅಶೋಕ್‌, ‘ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಯಾರೂ ನನ್ನ ಹೆಸರು ಹೇಳುವುದಿಲ್ಲ. ಕೆಟ್ಟದಾದರೆ ಅಶೋಕ್ ಸೋಲಿಗೆ ಕಾರಣ ಎನ್ನುತ್ತಾರೆ’ ಎಂದು ತಿರುಗೇಟು ನೀಡಿದರು. ‘ಅಶೋಕ್ ತುಂಬಾ ಒಳ್ಳೆಯವರು’ ಎಂದು ಸೋಮಣ್ಣ ಸಮಾಧಾನಪಡಿಸಲು ಯತ್ನಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ‘ರಾಜಕೀಯ ಮತ್ತು ಸಾಮಾಜಿಕ ಸಮೀಕರಣದಲ್ಲಿ ಚತುರರಾಗಿದ್ದ ಅನಂತಕುಮಾರ್ ಇಲ್ಲದ ಮೊದಲ ಚುನಾವಣೆ ಎದುರಿಸುತ್ತಿದ್ದೇವೆ. ಈ ಬಾರಿಯ ಚುನಾವಣೆ ತುಂಬಾ ಪ್ರಾಮುಖ್ಯ ಪಡೆದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 25 ಕ್ಕೂ ಹೆಚ್ಚು ಸ್ಥಾನ ಪಡೆಯಲಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ’ ಎಂದು ಹೇಳಿರು.

ತೇಜಸ್ವಿನಿ ಅನಂತ ಕುಮಾರ್, ‘ಸುತ್ತೂರು ಶ್ರೀಗಳ ಜೊತೆಯಲ್ಲಿ ಅನಂತ ಕುಮಾರ್ ಉತ್ತಮ ಬಾಂಧವ್ಯ ಹೊಂದಿದ್ದರು. ನನ್ನ ಮಕ್ಕಳು ಕೂಡಾ ಜೆಎಸ್ಎಸ್‌ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಗೆಲವು ಸಾಧಿಸಲು ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.