ADVERTISEMENT

ರಾಜಕಾಲುವೆ ತಡೆಗೋಡೆ ಮರುನಿರ್ಮಾಣ ವಿಳಂಬಕ್ಕೆ ಕಿಡಿ

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 3:02 IST
Last Updated 21 ಅಕ್ಟೋಬರ್ 2021, 3:02 IST

ಬೆಂಗಳೂರು: ಮೈಸೂರು ಹೆದ್ದಾರಿ ರಸ್ತೆಯ ಪಕ್ಕದ ಬಿಡಿಎ ಸಂಕೀರ್ಣದ ಬಳಿ ಕುಸಿದಿದ್ದ ರಾಜಕಾಲುವೆ ತಡೆಗೋಡೆ ಮರುನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅಸಮಾಧಾನ ವ್ಯಕ್ತಪಡಿಸಿದರು.

ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆರ್‌.ಆರ್‌.ನಗರದ ವಲಯ ಆಯುಕ್ತರು, ವಿಶೇಷ ಆಯುಕ್ತರು (ಯೋಜನೆ) ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಸೂಚಿಸಿದರು.

ರಾಜರಾಜೇಶ್ವರಿ ನಗರ ವಲಯ ಮತ್ತು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿ ಉಂಟಾಗಿರುವ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಅವರು ಪರಿಶೀಲಿಸಿದರು. ಈ ವೇಳೆ ಅವರು ಈ ರಾಜಕಾಲುವೆ ತಡೆಗೋಡೆಯ ಕಾಮಗಾರಿಯನ್ನೂ ಪರಿಶೀಲಿಸಿದರು. ₹ 19.20 ಕೋಟಿ ವೆಚ್ಚದಲ್ಲಿ ರಾಜಕಾಲುವೆಯ ತಡೆಗೋಡೆಯ ಮರು ನಿರ್ಮಾಣ ಹಾಗೂ ಮೋರಿ ಮೂಲಕ ನೀರು ಸರಾಗವಾಗಿ ಹರಿಯುವ ಸಲುವಾಗಿ ಕಾಲುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ‘ಪ್ರಜಾವಾಣಿ’ ಇದೇ 16ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ADVERTISEMENT

ರಾಜರಾಜೇಶ್ವರಿ ವಾರ್ಡ್‌ ವ್ಯಾಪ್ತಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದ ಹಿಂಭಾಗದ ಇತ್ತೀಚಿನ ಮಳೆಯಲ್ಲಿ ಜಾನುವಾರುಗಳು ಕೊಚ್ಚಿ ಹೋಗಿದ್ದ ಪ್ರದೇಶಕ್ಕೂ ಮುಖ್ಯ ಆಯುಕ್ತರು ಭೇಟಿ ನೀಡಿದರು. ಶೀಘ್ರವೇ ಟೆಂಡರ್ ಕರೆದು ಇಲ್ಲಿ ರಾಜಕಾಲುವೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಮೋದ ಬಡಾವಣೆಯಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ಹರಿದು ಹಾನಿ ಉಂಟಾಗಿತ್ತು. ಈ ಬಡಾವಣೆಯಲ್ಲಿರುವ ರಾಜಕಾಲುವೆಗೂ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಆದೇಶಿಸಿದರು.

ಮಳೆಯಿಂದ ಆದ ಅನಾಹುತ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ರಾಜಕಾಲುವೆ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾರ್ಯಗಳನ್ನೂ ಆದಷ್ಟು ಬೇಗ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.