ADVERTISEMENT

‘ಸ್ವಿಗ್ಗಿ’ ಹುಡುಗರಿಂದ ‘ಎಂಪೈರ್’ ಪುಡಿ!

ಬನ್ನೇರುಘಟ್ಟ ರಸ್ತೆಯ ಹೋಟೆಲ್‌ ಬಳಿ ಹೊಡೆದಾಟ * ಲಾಠಿ ಚಾರ್ಜ್‌, 28 ಮಂದಿಯ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:14 IST
Last Updated 13 ಜನವರಿ 2019, 20:14 IST
ಹೋಟೆಲ್ ಗಾಜು ಒಡೆದಿರುವುದು
ಹೋಟೆಲ್ ಗಾಜು ಒಡೆದಿರುವುದು   

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ‘ಎಂಪೈರ್’ ಹೋಟೆಲ್ ನೌಕರರು ಹಾಗೂ ‘ಸ್ವಿಗ್ಗಿ’ ಡೆಲಿವರಿ ಬಾಯ್‌ಗಳ ನಡುವೆ ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆದಿದ್ದು, 60ಕ್ಕೂ ಹೆಚ್ಚು ಯುವಕರು ಕಲ್ಲು ತೂರಿ ಹೋಟೆಲ್ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

ದಾಂದಲೆ ಸಂಬಂಧ ಮೈಕೊಲೇಔಟ್ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಾಗಿದ್ದು, ‘ಎಂಪೈರ್‌’ನ ಏಳು ನೌಕರರನ್ನು ಹಾಗೂ ‘ಸ್ವಿಗ್ಗಿ’ಯ 21 ಹುಡುಗರನ್ನು ಪೊಲೀಸರು ಬಂಧಿಸಿದ್ದಾರೆ.

ಪರಿಸ್ಥಿತಿ ಕೈಮೀರಿದ್ದು ಹೀಗೆ: ರಾತ್ರಿ 8 ಗಂಟೆ ಸುಮಾರಿಗೆ ಸ್ವಿಗ್ಗಿಯ ನದೀಂ ಅರಕೆರೆ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದ. ಇದೇ ವೇಳೆ ಎಂಪೈರ್
ನೌಕರ ಫಾರೂಕ್‌ ಕೂಡ ಅದೇ ರಸ್ತೆಯಲ್ಲಿ ಹೋಟೆಲ್‌ಗೆ ತೆರಳುತ್ತಿದ್ದ. ಆಗ ಆಕಸ್ಮಿಕವಾಗಿ ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಇದರಿಂದ ಪರಸ್ಪರರು ಜಗಳವಾಡಿಕೊಂಡಿದ್ದರು. ಸಂಚಾರ ಪೊಲೀಸರು ಇಬ್ಬರಿಗೂ ಬೈದು ಕಳುಹಿಸಿದ್ದರು.

ADVERTISEMENT

ಅದೇ ಜಿದ್ದಿನಲ್ಲಿ ರಾತ್ರಿ 9.30ರ ಸುಮಾರಿಗೆ ಸಹಚರರೊಂದಿಗೆ ಎಂಪೈರ್ ಹೋಟೆಲ್ ಬಳಿ ತೆರಳಿದ ನದೀಂ, ಫಾರೂಕ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಹೋಟೆಲ್‌ನ ಇತರೆ ನೌಕರರೆಲ್ಲ ಒಟ್ಟಾಗಿ ಪ್ರತಿದಾಳಿ ಮಾಡಿದ್ದಾರೆ. ಈ ಹಂತದಲ್ಲಿ ಹೋಟೆಲ್ ವ್ಯವಸ್ಥಾಪಕ ಮಧ್ಯಪ್ರವೇಶಿಸಿ, ‘ಎಂಪೈರ್ ಹಾಗೂ ಸ್ವಿಗ್ಗಿ ಬಿಸಿನೆಸ್ ಪಾರ್ಟ್ನರ್ಸ್‌ ಕಂಪನಿಗಳು. ನಾವೇ ಹೀಗೆ ಕಿತ್ತಾಡಿಕೊಂಡರೆ ಹೇಗೆ’ ಎಂದು ಬುದ್ಧಿ ಹೇಳಿದ್ದಾರೆ. ಆ ಮಾತನ್ನು ಕೇಳದೆ ಅವರ ಮೇಲೂ ನೌಕರರು ಹಲ್ಲೆ ಮಾಡಿದ್ದಾರೆ. ಕೂಡಲೇ ವ್ಯವಸ್ಥಾಪಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಮೈಕೊಲೇಔಟ್ ಪೊಲೀಸರು, ಲಾಠಿ ಬೀಸಿ ಗುಂಪು ಚದುರಿಸಿದ್ದಾರೆ. ಬಳಿಕ ಎರಡು ಗುಂಪಿನವರನ್ನೂ ಠಾಣೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ನದೀಂ ಕೊಟ್ಟ ದೂರಿನ ಅನ್ವಯ ಫಾರೂಕ್ ಸೇರಿದಂತೆ ಎಂಪೈರ್‌ನ 7 ಮಂದಿಯನ್ನು ಬಂಧಿಸಿದ್ದಾರೆ.

ರೊಚ್ಚಿಗೆಬ್ಬಿಸಿದ ಸಂದೇಶ: ಈ ಸಂದರ್ಭದಲ್ಲಿ ಸ್ವಿಗ್ಗಿಯ ನೌಕರನೊಬ್ಬ, ‘ಎಂಪೈರ್‌ನ ಕೇರಳದ ಹುಡುಗರು ಸ್ವಿಗ್ಗಿಯ ಕನ್ನಡಿಗರಿಗೆ ಹೊಡೆದಿದ್ದಾರೆ. ಎಲ್ಲರೂ ಒಟ್ಟಾಗದಿದ್ದರೆ ನಮ್ಮೂರಲ್ಲಿ ನಮಗೇ ರಕ್ಷಣೆ ಇಲ್ಲದಂತಾಗುತ್ತದೆ’ ಎಂದು ನೌಕರರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಸಂದೇಶ ಹರಿಬಿಟ್ಟಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಅದು ಫೇಸ್‌ಬುಕ್‌ಗೂ ತಲುಪಿ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ.

12.30ರ ಸುಮಾರಿಗೆ ಬೈಕ್‌ಗಳಲ್ಲಿ ಹೋಟೆಲ್‌ ಬಳಿ ಬಂದ 60ಕ್ಕೂ ಹೆಚ್ಚು ಹುಡುಗರು, ಏಕಾಏಕಿ ಹೋಟೆಲ್‌ನೊಳಗೆ ನುಗ್ಗಿ ಅಡುಗೆ ಕೋಣೆಯಲ್ಲಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಗ್ರಾಹಕರು ಗಾಬರಿಯಿಂದ ಹೊರನಡೆಯುತ್ತಿದ್ದಂತೆಯೇ ಪೀಠೋಪಕರಣಗಳನ್ನೂ ಧ್ವಂಸ ಮಾಡಿದ್ದಾರೆ.

ಆ ನಂತರ ಎಲ್ಲರೂ ಹೊರಗೆ ಬಂದು ಹೋಟೆಲ್‌ ಮೇಲೆ ಕಲ್ಲು ತೂರಿದ್ದರಿಂದ, ಮುಂಭಾಗದ ಗಾಜುಗಳು ಸಂಪೂರ್ಣ ಒಡೆದು ಹೋಗಿವೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಆರು ಠಾಣೆಗಳ ಪೊಲೀಸರು ಸ್ಥಳಕ್ಕೆ ಬಂದು ಲಾಠಿ ಚಾರ್ಜ್‌ ಮಾಡಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ರಾತ್ರಿಯಿಡೀ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಒಂದು ಕೆಎಸ್‌ಆರ್‌‍ಪಿ ತುಕಡಿಯನ್ನು ಬೆಳಿಗ್ಗೆವರೆಗೂ ಭದ್ರತೆಗೆ ನಿಯೋಜಿಸಲಾಗಿತ್ತು.

ಸಿಲಿಂಡರ್‌ನಿಂದ ಹೊಡೆದರು

‘ನದೀಂಗೆ ಹೊಡೆದಿದ್ದನ್ನು ಪ್ರಶ್ನಿಸಲು ಹೋಟೆಲ್‌ಗೆ ಹೋಗಿದ್ದೆವು. ಈ ವೇಳೆ ಅಲ್ಲಿನ ನೌಕರರು ನಮ್ಮನ್ನು ಹಿಂಭಾಗದ ಕೊಠಡಿಗೆ ಎಳೆದೊಯ್ದು ಕಟ್ಟಿಗೆಯಿಂದ ಹಲ್ಲೆ ನಡೆಸಿದರು. ಒಬ್ಬಾತನ ಕಾಲಿನ ಮೇಲೆ ಸಿಲಿಂಡರ್ ಎತ್ತಿ ಹಾಕಿದರು. ಗೆಳೆಯನ ಕಿವಿ ಹರಿದು ಹೋಗಿದ್ದು, ಹುಳಿಮಾವಿನಲ್ಲಿರುವ ಮಾತೃಶ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾಲೇಜು ವಿದ್ಯಾರ್ಥಿಗಳಾದ ನಾವು, ಮನೆಯಲ್ಲಿ ಬಡತನವಿರುವ ಕಾರಣ ಬಿಡುವಿನ ಅವಧಿಯಲ್ಲಿ ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲಿಂದಲೋ ಬಂದವರು ನಮ್ಮ ಹೊಟ್ಟೆ ಮೇಲೆ ಹೊಡೆದರೆ ಹೇಗೆ’ ಎಂದು ಸ್ವಿಗ್ಗಿ ನೌಕರ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ಜಗಳಕ್ಕೆ ಬೇರೆ ಬಣ್ಣ ಕಟ್ಟಿದರು

‘ಹೋಟೆಲ್‌ಗೆ ನುಗ್ಗಿದ ಸ್ವಿಗ್ಗಿ ಹುಡುಗರು, ಸಿಕ್ಕಸಿಕ್ಕವರಿಗೆ ಥಳಿಸಲಾರಂಭಿಸಿದರು. ಈ ಕಾರಣಕ್ಕೆ ನಾವೆಲ್ಲ ಒಟ್ಟಾಗಿ ಪ್ರತಿದಾಳಿ ಮಾಡಬೇಕಾಯಿತು. ಫಾರೂಕ್ ಜತೆ ಜಗಳವಾಗಿದ್ದರೆ ಅದು ಅವರ ವೈಯಕ್ತಿಕ ವಿಚಾರ. ಹೊರಗಡೆಯೇ ಬಗೆಹರಿಸಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಸಣ್ಣ ಜಗಳಕ್ಕೆ ಬೇರೆ ಬಣ್ಣ ಕಟ್ಟಿ ಇಂಥ ಪರಿಸ್ಥಿತಿ ನಿರ್ಮಾಣವಾಗುವಂತೆ ಮಾಡಿದರು. ಈ ಸಂಬಂಧ ಹೋಟೆಲ್ ನೌಕರರ ಸಂಘದ ಜತೆ ಮಾತುಕತೆ ನಡೆಸಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಂಪೈರ್ ನೌಕರರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.