ADVERTISEMENT

ದೋಸ್ತಿ ಗೊಂದಲ: ಸಿಂಡಿಕೇಟ್‌ ನೇಮಕಾತಿಗೆ ಅರ್ಧಚಂದ್ರ?

ವಿ.ವಿ.ಗಳಲ್ಲಿ ಪ್ರತಿಫಲಿಸಿದ ಅಧಿಕಾರ ಹಂಚಿಕೆ ತಿಕ್ಕಾಟ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:48 IST
Last Updated 18 ಜೂನ್ 2019, 19:48 IST

ಬೆಂಗಳೂರು: ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ಗೆ ಸರ್ಕಾರದಿಂದ ನಾಮನಿರ್ದೇಶನ ಸದಸ್ಯರನ್ನು ಕಿತ್ತುಹಾಕಿ ವರ್ಷವಾಗುತ್ತ ಬಂದರೂ, ಹೊಸದಾಗಿ ಸದಸ್ಯರನ್ನು ನಾಮನಿರ್ದೇಶನ ಮಾಡಲು ದೋಸ್ತಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಜಿ.ಟಿ.ದೇವೇಗೌಡರು ಉನ್ನತ ಶಿಕ್ಷಣ ಸಚಿವರಾದ ಬಳಿಕ ತೆಗೆದುಕೊಂಡ ನಿರ್ಧಾರಗಳಲ್ಲಿ ಇದೂ ಒಂದಾಗಿತ್ತು. ಹಿಂದಿನ ಸರ್ಕಾರ ನೇಮಿಸಿದವರನ್ನು ಕಿತ್ತು ಹಾಕುವುದು ಅನೂಚಾನವಾಗಿ ನಡೆದುಬಂದ ಪದ್ಧತಿ. ಒಂದೇ ಪಕ್ಷ ಅಧಿಕಾರದಲ್ಲಿದ್ದಾಗ ತಮಗೆ ಬೇಕಾದವರನ್ನು ನೇಮಕ ಮಾಡಲಾಗುತ್ತಿತ್ತು. ಮೈತ್ರಿ ಸರ್ಕಾರ ಬಂದ ಬಳಿಕ, ಸಿಂಡಿಕೇಟ್‌ ಸದಸ್ಯರಾಗಿ ನೇಮಕವಾಗಲು ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಯಿತು. ಯಾವ ಪ‍ಕ್ಷದವರನ್ನು ನಾಮನಿರ್ದೇಶನ ಮಾಡಬೇಕು ಎಂಬ ಗೊಂದಲ, ಒಂದು ವೇಳೆ ನಾಮನಿರ್ದೇಶನ ಮಾಡಿದರೆ ಉಂಟಾಗಬಹುದಾದ ಪರ–ವಿರೋಧದ ಪರಿಣಾಮದ ಕಾರಣಕ್ಕೆ ಈ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.

‘ಪ್ರತಿಯೊಂದು ವಿಶ್ವವಿದ್ಯಾಲಯದಲ್ಲೂ ಸಿಂಡಿಕೇಟ್‌ ಸದಸ್ಯರಾಗಿ ಶಿಕ್ಷಣ ತಜ್ಞರು, ರಾಜ್ಯಪಾಲರಿಂದ ನೇಮಕಗೊಂಡ ಇಬ್ಬರು ಸದಸ್ಯರು ಇರುತ್ತಾರೆ. ಸರ್ಕಾರದಿಂದ ನೇಮಕಗೊಂಡ 5ರಿಂದ 6 ಸದಸ್ಯರೂ ಇರುತ್ತಾರೆ. ಇವರೆಲ್ಲ ಇದ್ದಾಗ ಒಂದು ಸಮಗ್ರ ದೃಷ್ಟಿಕೋನದ ಉನ್ನತ ಶಿಕ್ಷಣದ ಯೋಜನೆಗಳನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಸರ್ಕಾರಿ ನೇಮಕಾತಿ ಇರದಿದ್ದರೂ ಕೋರಂ ಕೊರತೆ ಆಗಿಲ್ಲ. ಹೀಗಾಗಿ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸಭೆಗಳು, ನಿರ್ಧಾರಗಳು ಈ ಹಿಂದಿನಂತೆಯೇ ನಡೆಯುತ್ತಿವೆ. ಆದರೂ ಸರ್ಕಾರಿ ನಾಮಕರಣ ಸದಸ್ಯರುಇರಬೇಕಿತ್ತು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಿರಿಯ ಶಿಕ್ಷಣ ತಜ್ಞರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸರ್ಕಾರದಿಂದ ನಾಮಕರಣಗೊಂಡವರುಸ್ಥಳೀಯ ವಿಚಾರಣಾ ಸಮಿತಿಯಲ್ಲೂ (ಎಲ್‌ಐಸಿ) ಇರುತ್ತಾರೆ. ಸಿಂಡಿಕೇಟ್‌ನ ಮಾನ ಹೋಗುವುದೇ ಈ ಹಂತದಲ್ಲಿ. ಈಗಾಗಲೇ ಇಂತಹ ಹಲವು ಪ್ರಕರಣಗಳು ನಡೆದಿವೆ. ಶಿಕ್ಷಣ ಕ್ಷೇತ್ರದ ಬಗ್ಗೆ ತಿಳಿವಳಿಕೆ ಇಲ್ಲದವರಿಂದ ಹಾಗೂ ರಾಜಕೀಯ ಪ್ರೇರಿತ ಒತ್ತಡಗಳಿಂದಾಗಿ ಇಂತಹ ಅಭಾಸಗಳಾಗಿವೆ. ಅದನ್ನು ಕಂಡಾಗ ನೇಮಕಾತಿ ಆಗದೆ ಇದ್ದರೇ ಉತ್ತಮ’ ಎಂದು ಇನ್ನೊಬ್ಬ ಶಿಕ್ಷಣ ತಜ್ಞರು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯರಾಗಲು 700ರಿಂದ 800 ಮಂದಿ ಉತ್ಸುಕರಾಗಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಇತರ ವಿಶ್ವವಿದ್ಯಾಲಯಗಳಲ್ಲೂ ಆಸಕ್ತರ ಪಟ್ಟಿ ದೊಡ್ಡದೇ ಇದೆ. ದೋಸ್ತಿಗಳ ಗೊಂದಲ ಹೆಚ್ಚಲು ಇಂತಹ ಹಲವು ಕಾರಣಗಳು ಇವೆ ಎಂದು ಮೂಲಗಳು ತಿಳಿಸಿವೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪ್ರತಿಕ್ರಿಯೆಗೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.