ADVERTISEMENT

ಸರ್ಕಾರಿ ಜಮೀನು ಪರಭಾರೆ: ತಹಶೀಲ್ದಾರ್‌, ಮತ್ತಿಬ್ಬರು ಸಸ್ಪೆಂಡ್‌

ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 2:16 IST
Last Updated 12 ಡಿಸೆಂಬರ್ 2019, 2:16 IST

ಬೆಂಗಳೂರು: ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರ ಆದೇಶ ಉಲ್ಲಂಘಿಸಿ, ವರ್ತೂರು ಹೋಬಳಿಯ ಮುಳ್ಳೂರು ಗ್ರಾಮದ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಲು ಸಹಕರಿಸಿದ ಕೆ.ಆರ್‌.ಪುರ ತಹಶೀಲ್ದಾರ್‌ ತೇಜಸ್‌ ಕುಮಾರ್‌ ಸೇರಿದಂತೆ ಮೂವರು ಅಧಿಕಾರಿಗಳನ್ನು ಬುಧವಾರ ಸಸ್ಪೆಂಡ್‌ ಮಾಡಲಾಗಿದೆ.

ಜಮೀನು ಮಾರಾಟಕ್ಕೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಿದ ವಿಶೇಷ ತಹಶೀಲ್ದಾರ್‌ ಎನ್‌.ಶಿವಕುಮಾರ್‌, ಬಾಣಸವಾಡಿ ಉಪ ನೋಂದಣಾಧಿಕಾರಿ ಎಂ.ಕೆ. ಶಾಂತಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಸ್ಪೆಂಡ್‌ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕಿ ಕುಸುಮಲತಾ ಅವರೂ ಪ್ರಕರಣದಲ್ಲಿ ಭಾಗಿಯಾಗಿದ್ದು, ಎಲ್ಲ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ಸೂಚಿಸಲಾಗಿದೆ.

ಮುಳ್ಳೂರು ಗ್ರಾಮದ ಸರ್ವೆ ನಂಬರ್‌ 49ರ (ಹೊಸ ನಂಬರ್‌ 114) ರ 73 ಎಕರೆ ಜಮೀನಿನಲ್ಲಿ 10 ಎಕರೆಯನ್ನು ಮಾತ್ರ ನೈಜ ಫಲಾನುಭವಿಗಳಿಗೆ ನೀಡಿ, ಉಳಿದ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾರಾಟ ಮಾಡಲು ಸಹಕರಿಸಿದ ಆರೋಪಕ್ಕೆ ಈ ಅಧಿಕಾರಿಗಳು ಒಳಗಾಗಿದ್ದಾರೆ.

ADVERTISEMENT

ಕಾನೂನುಬಾಹಿರವಾಗಿ ಮಾರಾಟ ಮಾಡಿರುವ ಜಮೀನಿನ ಮಾರುಕಟ್ಟೆ ಬೆಲೆ ₹ 1,250 ಕೋಟಿಗೂ ಹೆಚ್ಚು ಎಂದು ಕಂದಾಯ ಇಲಾಖೆ ಅಂದಾಜಿಸಿದ್ದು, ಮಾರಾಟ ಮತ್ತು ನೋಂದಣಿ ಪ್ರಕ್ರಿಯೆ ರದ್ದುಪಡಿಸುವಂತೆ ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕ್ಲರಿಟನ್‌ ಕಾಂಗ್ರಿಗೇಷನ್‌ನ ಭಾರತ ಪ್ರಾಂತೀಯ ಸದಸ್ಯರಾದ ಫಾದರ್‌ ಮ್ಯಾಥ್ಯೂ ಪಿ., ಜಾರ್ಜ್‌ ಕೆ. ಅವರು ಇದೇ 9ರಂದು ನೀಡಿದ ದೂರಿನ ವಿಚಾರಣೆ ನಡೆಸಿದಾಗ ಈ ಭಾರಿ ವಂಚನೆ ಪ್ರಕರಣ ಬಯಲಿಗೆ ಬಂದಿದೆ.

ಈ ಅಧಿಕಾರಿಗಳು 49/7 ಜಮೀನಿಗೆ ಹೊಸ ಸರ್ವೆ ನಂಬರ್‌ ಕೊಟ್ಟು, ಅಗತ್ಯ ಪ್ರಕ್ರಿಯೆಗಳನ್ನು ಪಾಲಿಸದೆ ನಕಲಿ ದಾಖಲೆ ಸೃಷ್ಟಿಸಿ, ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಅವರು ಹೇಳಿದ್ದರು.

ಮುಳ್ಳೂರು ಗ್ರಾಮದ ಸರ್ವೆ ನಂಬರ್‌ 49, 47, 48, 49/6, 44,45 ಮತ್ತು 91ರ ಜಮೀನುಗಳನ್ನು ನೋಂದಣಿ ಮಾಡಬಾರದೆಂದು ಎಲ್ಲ ಉಪ ನೋಂದಣಾಧಿಕಾರಿಗಳಿಗೆ ನಿರ್ದೇಶಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಅವರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ವಿ. ತ್ರಿಲೋಕ ಚಂದ್ರ ಅವರಿಗೆ ಅಕ್ಟೋಬರ್‌ 11ರಂದು ಪತ್ರ ಬರೆದಿದ್ದರು.

ಅದರಂತೆ ತ್ರಿಲೋಕ ಚಂದ್ರ, ಅಕ್ಟೋಬರ್‌ 12ರಂದು ಪತ್ರ ಬರೆದು, ಈ ಸರ್ವೆ ನಂಬರ್‌ಗಳ ಜಮೀನನ್ನು ನೋಂದಣಿ ಮಾಡಬಾರದೆಂದು ಸೂಚಿಸಿದ್ದರು. ಹಿರಿಯ ಅಧಿಕಾರಿಗಳ ಸೂಚನೆ ಕಡೆಗಣಿಸಿ, ಬಾಣಸವಾಡಿ ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿಸರ್ವೆ ನಂಬರ್‌ 49/1ರ ಜಮೀನನ್ನು ಮಾರಾಟ ಮಾಡಲಾಗಿದೆ.

ಜಮೀನು ಅಕ್ರಮ ವ್ಯವಹಾರ ಕುರಿತು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ದಯಾನಂದ ಭಂಡಾರಿ ವಿಚಾರಣೆ ನಡೆಸಿ, ವರದಿ ನೀಡಿದ್ದರು. ಸರ್ವೆ ನಂಬರ್‌ 49ರ ಜಮೀನಿಗೆ ನಮೂನೆ 1ರಿಂದ 5 ಅನ್ನು ಫೋರ್ಜರಿ ಮಾಡಲಾಗಿದೆ. ದರ್ಖಾಸ್ತು ಜಮೀನು ಪೋಡಿಗೆ ಸಂಬಂಧಪಟ್ಟಂತೆ ಸರ್ಕಾರದ ಸೂಚನೆಗಳನ್ನು ಧಿಕ್ಕರಿಸಲಾಗಿದೆ. ಸರ್ವೆ ನಂಬರ್‌ 49/7 ಅನ್ನು ಸಂರಕ್ಷಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೂಚನೆ ಇದ್ದರೂ ಲೆಕ್ಕಿಸದೆ ಖಾಸಗಿಯವರಿಗೆ ಪರಭಾರೆ ಮಾಡಲು ತಹಶೀಲ್ದಾರ್‌ ಕಾರಣವಾಗಿದ್ದಾರೆ ಎಂದು ಹೇಳಿದ್ದರು.

ವಿಶೇಷ ತಹಶೀಲ್ದಾರ್‌ ಅವರಿಗೆ ಎನ್‌ಒಸಿ ನೀಡಲು ಖಾಸಗಿ ವ್ಯಕ್ತಿಯು ಡಿಸೆಂಬರ್ 2ರಂದು ಅರ್ಜಿ ಸಲ್ಲಿಸಿದ್ದರು. ಅದೇ ದಿನ ಎನ್‌ಒಸಿ ನೀಡಲಾಗಿದೆ. ತಹಶೀಲ್ದಾರ್‌ ಅವರ ಮೌಖಿಕ ಆದೇಶವನ್ನು ಕಿವಿ ಮೇಲೆ ಹಾಕಿಕೊಳ್ಳದೆ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಮೇಲೆ ವಿಷಯ ನಿರ್ವಾಹಕರ ಕಚೇರಿ ಟಿಪ್ಪಣಿ ಇಲ್ಲದಿದ್ದರೂ ತರಾತುರಿಯಲ್ಲಿ ಎನ್‌ಒಸಿ ನೀಡಲಾಗಿದೆ. ಎನ್‌ಒಸಿ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ಖಾಸಗಿಯವರಿಗೆ ಜಮೀನು ಪರಭಾರೆ ಮಾಡಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎನ್‌ಒಸಿ ನೀಡಿದ್ದಾರೆ ಎಂದು ಭಂಡಾರಿ ವರದಿಯಲ್ಲಿ ಸ್ಪಷ್ಟಪಡಿಸಿದ್ದರು. ವಿಚಾರಣಾ ವರದಿ ಪರಿಶೀಲಿಸಿದ ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.