ADVERTISEMENT

ಟೇಕ್ ಇಟ್ ಈಸಿ, ಇದು ಬಿಎಂಟಿಸಿ!

ಆದ್ಯತಾ ಪಥ: ‘ನಿಮ್ಮಬಸ್’ ಪ್ರಚಾರಕ್ಕೆ ಹರಿಕಥೆ ಮಾದರಿಯ ವಿಡಿಯೊ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 1:37 IST
Last Updated 11 ಡಿಸೆಂಬರ್ 2019, 1:37 IST
ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಕಾರ್ಟೂನ್
ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಕಾರ್ಟೂನ್   

ಬೆಂಗಳೂರು: ‘ಬಸ್‌ನಲ್ಲಿ ಓಡಾಡುವುದರಿಂದ ನಿಮ್ಮ ಜೇಬು, ಜಾಬು, ಪರಿಸರಕ್ಕೆ ಒಳ್ಳೆಯದು, ಟೇಕ್ ಇಟ್ ಈಸಿ, ಇದು ನಮ್ಮ ಬಿಎಂಟಿಸಿ...’

ಪ್ರತ್ಯೇಕ ಪಥದಲ್ಲಿ ಸಾಗುವ ‘ನಿಮ್ಮಬಸ್‌’ಗಳಿಗೆ ಪ್ರಯಾಣಿಕರನ್ನು ಸೆಳೆಯಲು ಬಿಎಂಟಿಸಿ ಸಿದ್ಧಪಡಿಸಿರುವ ಹರಿಕಥೆ ಮಾದರಿಯ ವಿಡಿಯೊ ತುಣುಕಿನ ಸಾಲುಗಳಿವು.

ಸಿಲ್ಕ್ ಬೋರ್ಡ್‌ನಿಂದ ಟಿನ್ ಫ್ಯಾಕ್ಟರಿ ತನಕ ಹೊರ ವರ್ತುಲ ರಸ್ತೆಯಲ್ಲಿ ಬಸ್‌ಗಾಗಿ ಆದ್ಯತಾ ಪಥವನ್ನು ಬಿಬಿಎಂಪಿ ಸಿದ್ಧಪಡಿಸಿದೆ. ಈ ಮಾರ್ಗದಲ್ಲಿ ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡಲುಬಿಎಂಟಿಸಿಯು ಟ್ವಿಟರ್, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದೆ. ಆದ್ಯತಾ ಪಥದ ಪ್ರಚಾರಾರ್ಥ ರೂಪಿಸಿರುವ ವಿಡಿಯೊ (youtu.be/iXXwcbDcsiw) ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ADVERTISEMENT

‘ಕಲಿಯುಗದ ಮಧ್ಯಕಾಲದಲ್ಲಿ, ಭರತ ಭೂಮಿಯ ಕರ್ನಾಟಕದ ಬೆಂಗಳೂರು ನಗರದಲ್ಲಿ...’ ಎಂದು ‌ವಿಡಿಯೊ ಆರಂಭವಾಗುತ್ತದೆ. ಐ.ಟಿ ಉದ್ಯೋಗಿ ರಮೇಶ ‘ನಿಮ್ಮಬಸ್‌’ ಬಳಸುವ ಮೂಲಕ ಹೇಗೆ ಸಂಚಾರ ದಟ್ಟಣೆಯಿಂದ ಪಾರಾಗುತ್ತಾನೆ ಹಾಗೂ ಸ್ವಂತ ಕಾರು ಬಳಸುವ ಸುರೇಶ ಹೇಗೆ ದಟ್ಟಣೆಯಲ್ಲಿ ಸಿಲುಕಿ ಸಮಸ್ಯೆ ಎದುರಿಸುತ್ತಾನೆ ಎಂಬುದನ್ನು ವಿಡಿಯೊದಲ್ಲಿ ವಿವರಿಸಲಾಗಿದೆ.

‘ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರೆ ಸಕಾಲದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಗುರಿ ತಲುಪಬಹುದು. ಪರಿಸರದ ಮೇಲಾಗುವ ಹಾನಿಯನ್ನೂ ತಪ್ಪಿಸಬಹುದು ಎಂಬುದು ಈ ವಿಡಿಯೊದ ತಾತ್ಪರ್ಯ’ ಎನ್ನುತ್ತಾರೆ ಸಂಸ್ಥೆಯ ಅಧಿಕಾರಿಗಳು.

ಬಸ್ ಪ್ರಯಾಣಿಕರ ವೇದಿಕೆ ಸೇರಿದಂತೆ ಸಾರ್ವಜನಿಕ ಸಂಘಟನೆಗಳು ‘ನಿಮ್ಮಬಸ್‌’ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿವೆ. ಕಾರ್ಟೂನ್, ಚಿತ್ರಗಳು, ವಿಡಿಯೊಗಳನ್ನು ಹಂಚಿಕೆ ಮಾಡಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿವೆ.

ನಿಮ್ಮಬಸ್ ಎಕ್ಸ್‌ಪ್ರೆಸ್‌ ಯಾತ್ರೆ ನಾಳೆ
ಬಸ್ ಪ್ರಯಾಣಿಕರ ವೇದಿಕೆ, ಸಿಟಿಜನ್ ಫಾರ್ ಬೆಂಗಳೂರು, ಬೆಳ್ಳಂದೂರು ಜೊತೆಗೆ,ವೈಟ್‌ಫೀಲ್ಡ್ ರೈಸಿಂಗ್ ಸಂಘಟನೆಗಳು ಇದೇ 11ರಂದು (ಬುಧವಾರ) ‘ನಿಮ್ಮಬಸ್ ಎಕ್ಸ್‌ಪ್ರೆಸ್’ ಯಾತ್ರೆ ಆಯೋಜಿಸಿವೆ.

‘ಬೆಳಿಗ್ಗೆ 9 ಗಂಟೆಗೆ ಸಿಲ್ಕ್ ಬೋರ್ಡ್‌ ಜಂಕ್ಷನ್ ಮತ್ತು 10 ಗಂಟೆಗೆ ಮಾರತಹಳ್ಳಿ ಸ್ಕೈವಾಕ್ ಬಳಿಯಿಂದ ಯಾತ್ರೆ ಆರಂಭವಾಗಲಿದೆ. ಬಿಎಂಟಿಸಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್ ಕಮಿಷನರ್, ನಗರ ಭೂಸಾರಿಗೆ ನಿರ್ದೇಶನಾಲಯದ(ಡಲ್ಟ್‌) ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ಬಸ್ ಪ್ರಯಾಣಿಕರ ವೇದಿಕೆ ತಿಳಿಸಿದೆ.

ಬಸ್‌ ಬಳಕೆ ಉತ್ತೇಜಿಸಲು ಹಮ್ಮಿಕೊಂಡ ಈ ಅಭಿಯಾನದಲ್ಲಿ ಚಿತ್ರನಟ ಚೇತನ್‌,ಅಶ್ವಿನ್ ಶರ್ಮ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. ಗಾಯಕಿ ಎಂ.ಡಿ.ಪಲ್ಲವಿ ಸಹಿತಪ್ರಸಿದ್ಧ ಸಂಗೀತಗಾರರೂ ಯಾತ್ರೆ ಯುದ್ಧಕ್ಕೂ ಹಾಡಲಿದ್ದಾರೆ. ಸ್ವರಾತ್ಮ ಕನ್ನಡ ಜಾನಪದ ರಾಕ್‌ ಬ್ಯಾಂಡ್‌ ಈ ಕುರಿತು ವಿಶೇಷ ಕಾರ್ಯಕ್ರಮ ನಡೆಸಿಕೊಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.