ತನ್ವಿರ್ ಅಹ್ಮದ್
ಬೆಂಗಳೂರು: ‘ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ವಿರೋಧಿಸಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೊಂದಿಗೆ ನಾವಿದ್ದೇವೆ ಎಂದು ಸಾರಲು ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ತನ್ವಿರ್ ಅಹ್ಮದ್ ತಿಳಿಸಿದ್ದಾರೆ.
ವಿಶೇಷ ತನಿಖಾ ದಳ ವಿಚಾರಣೆ ಆರಂಭಿಸಿದ ಬಳಿಕ ಅನೇಕ ಆರೋಪಗಳು ನಿರಾಧಾರ ಎಂದು ಸಾಬೀತಾಗಿದೆ. ಆದರೂ ಜನರ ಮನಸ್ಸಲ್ಲಿ ಧರ್ಮಸ್ಥಳದ ಬಗ್ಗೆ ಮೂಡಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ನ.18ರಂದು ಧರ್ಮಸ್ಥಳದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗಿಯಾಗುತ್ತಿರುವ ನಾನು ಬರೀ ಭಾಷಣ ಮಾಡಲು ಹೋಗುತ್ತಿಲ್ಲ. ಭಾರತದ ಪುನರ್‌ನಿರ್ಮಾಣಕ್ಕೆ ಅಗತ್ಯ ಇರುವ ಏಕತೆಯ ಸಂದೇಶವನ್ನು ಹೊತ್ತು ಸಾಗುತ್ತಿದ್ದೇನೆ’ ಎಂದರು.
ಪಾದಯಾತ್ರೆಯು ನ.8ರಂದು ಬೆಳಿಗ್ಗೆ 8.30ಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದ ಬಳಿ ಆರಂಭಗೊಳ್ಳಲಿದೆ. 30 ಜನರ ತಂಡ ಇದರಲ್ಲಿ ಇರಲಿದೆ. 350 ಕಿ.ಮೀ. ದೂರದ ಧರ್ಮಸ್ಥಳಕ್ಕೆ ನ.17ಕ್ಕೆ ತಲುಪಲಿದೆ. ಅಲ್ಲಿಗೆ ತಲುಪುವ ಹೊತ್ತಿಗೆ ತಂಡದ ಸಂಖ್ಯೆ 500 ದಾಟಲಿದೆ ಎಂದು ತಿಳಿಸಿದರು.
‘ದೇಶಕ್ಕಾಗಿ ಕೊಡುಗೆ ನೀಡಿರುವ ಧರ್ಮಾಧಿಕಾರಿಯೊಂದಿಗೆ ನಾವಿದ್ದೇವೆ ಎಂದು ಸ್ಪಷ್ಟವಾಗಿ ಸಾರುವುದೇ ನಮ್ಮ ಉದ್ದೇಶ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.