ADVERTISEMENT

ಜಿಬಿಎ: ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಕಾರ್ಯಪಡೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 0:28 IST
Last Updated 29 ಜನವರಿ 2026, 0:28 IST
ಮಹೇಶ್ವರ್‌ ರಾವ್‌
ಮಹೇಶ್ವರ್‌ ರಾವ್‌   

ಬೆಂಗಳೂರು: ಐದು ನಗರ ಪಾಲಿಕೆಗಳಲ್ಲಿ ರಸ್ತೆ ವಿಸ್ತರಣೆ ಹಾಗೂ ಅನಧಿಕೃತ ಕಟ್ಟಡಗಳ ನಿಯಂತ್ರಣಕ್ಕೆ ಪ್ರತ್ಯೇಕ ಕಾರ್ಯಪಡೆ (ಟಾಸ್ಕ್‌ ಫೋರ್ಸ್‌) ರಚಿಸಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸೂಚಿಸಿದರು.

ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಕಾಮಗಾರಿಗಳ ಅನುಷ್ಠಾನ ಸಂದರ್ಭದಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪರಿಹರಿಸಲು ಬುಧವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ರಸ್ತೆ ವಿಸ್ತರಣೆ ಹಾಗೂ ಅನಧಿಕೃತ ಕಟ್ಟಡಗಳ ನಿರ್ಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ಈ ನಿಟ್ಟಿನಲ್ಲಿ ಆಯಾ ನಗರ ಪಾಲಿಕೆಗಳಲ್ಲಿ ಕೂಡಲೇ ಕಾರ್ಯಪಡೆ ರಚಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಪೌರಕಾರ್ಮಿಕರಿಗೆ ಮುಖಚಹರೆ ಹಾಜರಾತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದ್ದು, ಎಲ್ಲಾ ನಗರ ಪಾಲಿಕೆಗಳಲ್ಲಿಯೂ ಇದರ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಮುಂದಿನ ಎರಡು ವಾರಗಳೊಳಗೆ ಎಲ್ಲ ನಗರ ಪಾಲಿಕೆಗಳಲ್ಲಿಯೂ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ರೈಲ್ವೆ ಇಲಾಖೆ ವತಿಯಿಂದ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರ ಹಾಗೂ ಪ್ರಗತಿ ಪರಿಶೀಲನೆಗಾಗಿ ಸಮಗ್ರ ಪಟ್ಟಿ ಸಿದ್ಧಪಡಿಸಿ ವರದಿ ಸಲ್ಲಿಸಬೇಕು. ನಂತರ ಜಿಬಿಎ ಹಾಗೂ ರೈಲ್ವೆ ಇಲಾಖೆಯೊಂದಿಗೆ ಸಭೆ ನಡೆಸಿ ಕಾಮಗಾರಿಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

ರಾಜಕಾಲುವೆಗೆ ಕೊಳಚೆ ನೀರು ಹರಿದು ಬರದಂತೆ ಸಂಪೂರ್ಣ ತಡೆಯಬೇಕು. ಡೈಯಿಂಗ್ ಘಟಕಗಳಿಂದ ಬಣ್ಣದ ನೀರು ಹಾಗೂ ಕಸಾಯಿಖಾನೆ‌ಗಳಿಂದ ರಕ್ತ ಮಿಶ್ರಿತ ನೀರು ರಾಜಕಾಲುವೆಗೆ ಹರಿಯುತ್ತಿರುವ ಕುರಿತು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿಸಿದವರಿಗೆ ದುಪ್ಪಟ್ಟು ದಂಡ ವಿಧಿಸಬೇಕು. ಮತ್ತೆ ನೀರು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.