ADVERTISEMENT

ತೆರಿಗೆ ಬಾಕಿ: ಇ.ಸಿ.ಯಲ್ಲಿ ಉಲ್ಲೇಖ

ರಾಜರಾಜೇಶ್ವರಿನಗರ ವಲಯದಲ್ಲಿ ₹ 90 ಕೋಟಿ ಆಸ್ತಿ ತೆರಿಗೆ ಬಾಕಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 4:37 IST
Last Updated 28 ಡಿಸೆಂಬರ್ 2019, 4:37 IST
   

ಬೆಂಗಳೂರು: ಬಿಬಿಎಂಪಿಯ ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಒಟ್ಟು 40,722 ಸುಸ್ತಿದಾರರಿಂದ ₹ 90 ಕೋಟಿ ಆಸ್ತಿ ತೆರಿಗೆ ವಸೂಲಿ ಬಾಕಿ ಇದೆ. ₹5 ಲಕ್ಷಕ್ಕೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಇರುವ ಕಟ್ಟಡಗಳಿಗೆ ಬೀಗ ಹಾಕುವುದಲ್ಲದೇ ಅಂತಹ ಸ್ವತ್ತುಗಳ ಋಣಭಾರರಾಹಿತ್ಯ ಪ್ರಮಾಣ ಪತ್ರಗಳಲ್ಲೂ (ಇ.ಸಿ) ತೆರಿಗೆ ಬಾಕಿ ಬಗ್ಗೆ ಉಲ್ಲೇಖಿಸಲು ಪಾಲಿಕೆ ಮುಂದಾಗಿದೆ.

‘₹5 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ‌ಯನ್ನು ಎರಡು ವರ್ಷಗಳಿಗಿಂತ ಹೆಚ್ಚು ಸಮಯ ಬಾಕಿ ಉಳಿಸಿ
ಕೊಂಡಿರುವ ಸುಸ್ತಿದಾರರ ಕಟ್ಟಡಗಳಲ್ಲಿ ‘ಸ್ವತ್ತನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿದೆ’ ಎಂದು ಫಲಕ ಅಂಟಿಸುತ್ತಿದ್ದೇವೆ. ಆ ಆಸ್ತಿಯ ಇ.ಸಿ.ಯಲ್ಲೂ‘ಸ್ವತ್ತುಗಳು ಪಾಲಿಕೆಯ ವಶವಾಗಿದೆ’ ಎಂದು ನಮೂದಿಸುವಂತೆ ಉಪನೊಂದಣಾಧಿಕಾರಿಗಳ ಕಚೇರಿಯನ್ನು ಕೋರಿದ್ದೇವೆ’ ಎಂದು ಆರ್‌.ಅರ್‌. ನಗರ ವಲಯದ ಉಪಾಯುಕ್ತ ಕೆ. ಶಿವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಸ್ತಿದಾರರು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ‌2020ರ ಜನವರಿ ಅಂತ್ಯದೊಳಗೆ ವಸೂಲಿ ಮಾಡುವಂತೆ ಆಯುಕ್ತರು ಸೂಚಿಸಿದ್ದಾರೆ. ₹10 ಸಾವಿರಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಹಾಗೂ ಎರಡು ವರ್ಷಗಳಿಗಿಂತೆ ಹೆಚ್ಚು ಕಾಲ ತೆರಿಗೆ ಪಾವತಿಸದೆ ಇರುವ ಎಲ್ಲಾ ಸುಸ್ತಿದಾರರಿಗೆ ನೋಟಿಸ್‍ ಜಾರಿಗೊಳಿಸಿದ್ದೇವೆ. ₹ 1ಲಕ್ಷಕ್ಕೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರಿಗೆ ವಾರಂಟ್ ಜಾರಿಗೊಳಿಸಿ, ಆಸ್ತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ’ ಎಂದರು.

ADVERTISEMENT

‘ಆಸ್ತಿ ತೆರಿಗೆ ಪಾವತಿಸದಿದ್ದರೆ ಆ ಸ್ವತ್ತಿನ ಮಾಲೀಕತ್ವ ಪಾಲಿಕೆಯದಾಗುತ್ತದೆ ಎಂಬುದನ್ನು ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುತ್ತೇವೆ. ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆಯುತ್ತೇವೆ’ ಎಂದರು ಮಾಹಿತಿ ನೀಡಿದರು.

‘ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವವರು ಸ್ವತ್ತಿನ ಮೂಲ ಆಸ್ತಿ ತೆರಿಗೆಗೆ ತಿಂಗಳಿಗೆ ಶೇಕಡ 2 ರಂತೆ (ವರ್ಷಕ್ಕೆ ಶೇಕಡ 24 ರಂತೆ) ಬಡ್ಡಿ ಸಮೇತ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದನ್ನು ಸುಸ್ತಿದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.