ಬೆಂಗಳೂರು: ವಾಸ್ತವದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ ಜಮೀನುಗಳಿಗೆ ಹಾಗೂ ಕಟ್ಟಡಗಳಿಗೆ ಅಕ್ರಮವಾಗಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ಪತ್ರ ನೀಡಿದ್ದ ಪ್ರಕರಣದಲ್ಲಿ ಮಹಿಳಾ ಕೆಎಎಸ್ ಅಧಿಕಾರಿಗಳಿಬ್ಬರ ಹೆಸರು ಕೇಳಿಬಂದಿದ್ದು, ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ರಾಜ್ಯ ಸರ್ಕಾರದ ಅನುಮತಿ ಕೋರಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿರುವ ಎಸಿಬಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉಪ ಕಾರ್ಯದರ್ಶಿಯೂ ಆಗಿದ್ದ ಕೆಎಎಸ್ ಅಧಿಕಾರಿ ಮಂಗಳಾ ಹಾಗೂ ಲೀಲಾವತಿ ಅವರು ಪ್ರಕರಣದಲ್ಲಿ ಕಾನೂನು ಉಲ್ಲಂಘಿಸಿದ್ದು ಪತ್ತೆಯಾಗಿದೆ. ಅವರ ವಿರುದ್ಧ ತನಿಖೆ ನಡೆಸಬೇಕಾದ ಅಗತ್ಯವಿದೆ. ಇದಕ್ಕೆ ಅನುಮತಿ ನೀಡಿ’ ಎಂದು ವಿನಂತಿಸಿದ್ದಾರೆ.
‘ಅಭಿವೃದ್ಧಿ ಹಕ್ಕು ವರ್ಗಾವಣೆ ಪತ್ರಗಳನ್ನು ನೀಡುವಾಗ ಈ ಇಬ್ಬರೂ ಅಧಿಕಾರಿಗಳು ಯಾವುದೇ ಕಾನೂನು ಪಾಲಿಸಿಲ್ಲ. ನಿಯಮ ಉಲ್ಲಂಘಿಸಿ ಅಕ್ರಮವಾಗಿ ಪತ್ರಗಳನ್ನು ಹಂಚಿಕೆ ಮಾಡಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರವನ್ನೂ ವಂಚಿಸಿದ್ದಾರೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಟಿಡಿಆರ್ ಅಕ್ರಮ ಸಂಬಂಧ ಹಲವು ಪ್ರಕರಣಗಳು ದಾಖಲಾಗಿದ್ದು, ಎಸಿಬಿಯ ಪ್ರತ್ಯೇಕ ತಂಡಗಳು ತನಿಖೆ ನಡೆಸುತ್ತಿವೆ. ಹಲವರನ್ನು ಬಂಧಿಸಿ ಹೇಳಿಕೆ ಪಡೆಯಲಾಗಿದೆ. ಈ ಅಕ್ರಮದಲ್ಲಿ ಮಂಗಳಾ ಹಾಗೂ ಲೀಲಾವತಿ ಅವರೂ ಭಾಗಿಯಾಗಿರುವ ಪುರಾವೆಗಳು ಸಿಕ್ಕಿವೆ. ಹೀಗಾಗಿ, ಅವರ ವಿರುದ್ಧ ತನಿಖೆ ನಡೆಸಬೇಕಿದೆ’ ಎಂದೂ ಪತ್ರದಲ್ಲಿ ತಿಳಿಸಿರುವುದಾಗಿ ಎಸಿಬಿ ಮೂಲಗಳು ಹೇಳಿವೆ.
ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಎಸಿಬಿಯ ಹಿರಿಯ ಅಧಿಕಾರಿಯೊಬ್ಬರು, ‘ವಾರದ ಹಿಂದೆಯೇ ಪತ್ರ ಬರೆಯಲಾಗಿದ್ದು, ಇದುವರೆಗೂ ಪ್ರತಿಕ್ರಿಯೆ ಬಂದಿಲ್ಲ. ಪ್ರತಿಕ್ರಿಯೆ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.