ADVERTISEMENT

ಟಿಡಿಆರ್‌: ತನಿಖೆಗೆ ಎಳ್ಳು– ನೀರು?

ಎಸಿಬಿ ಹಿರಿಯ ಅಧಿಕಾರಿಗಳ ದಿಢೀರ್‌ ವರ್ಗಾವಣೆ! l ಪ್ರಕರಣ ದಾಖಲಿಸಲು ಇ.ಡಿ ಸಿದ್ಧತೆ

ಹೊನಕೆರೆ ನಂಜುಂಡೇಗೌಡ
Published 13 ಜುಲೈ 2019, 19:46 IST
Last Updated 13 ಜುಲೈ 2019, 19:46 IST

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್‌) ವಂಚನೆ ಕುರಿತು ಪ್ರಕರಣ ದಾಖಲಿಸಲು ‘ಜಾರಿ ನಿರ್ದೇಶನಾಲಯ’ (ಇ.ಡಿ) ಸಿದ್ಧತೆ ನಡೆಸುತ್ತಿರುವುದರ ನಡುವೆಯೇ, ಈ ಬಹುಕೋಟಿ ಹಗರಣದ ತನಿಖೆ ನಡೆಸುತ್ತಿರುವ ‘ಭ್ರಷ್ಟಾಚಾರ ನಿಗ್ರಹ ದಳ’ದ (ಎಸಿಬಿ) ಅಧಿಕಾರಿಗಳನ್ನು ಸರ್ಕಾರ ದಿಢೀರ್‌ ಎತ್ತಂಗಡಿ ಮಾಡಿದೆ.

‘ಟಿಡಿಆರ್‌ ತನಿಖೆ ಉಸ್ತುವಾರಿ ವಹಿಸಿದ್ದ ಎಸ್‌ಪಿ, ಡಾ.ಸಂಜೀವ ಪಾಟೀಲ ಅವರನ್ನುವಾರದ ಹಿಂದೆ ವರ್ಗ ಮಾಡಲಾಗಿತ್ತು. ಇದರ ಹಿಂದೆಯೇ, ಐಜಿಪಿ ಚಂದ್ರಶೇಖರ್‌ ಅವರನ್ನು ಬದಲಾವಣೆ ಮಾಡಲಾಗಿದೆ. ತನಿಖಾಧಿಕಾರಿ ರವಿ ಕುಮಾರ್‌ ಅವರೂ ಬಡ್ತಿ ನಿರೀಕ್ಷೆಯಲ್ಲಿದ್ದಾರೆ. ಈ ಪ್ರಕ್ರಿಯೆ ಚುರುಕುಗೊಳಿಸಿ, ಅವರನ್ನೂ ಅಲ್ಲಿಂದ ಕದಲಿಸಲು ಕೆಲವು ಹಿತಾಸಕ್ತಿಗಳು ಯತ್ನಿಸುತ್ತಿವೆ’ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಇಲ್ಲಿನ ಟಿ.ಸಿ ಪಾಳ್ಯ– ಭಟ್ಟರಹಳ್ಳಿ ರಸ್ತೆ ವಿಸ್ತರಣೆಗಾಗಿ ವಶಪಡಿಸಿಕೊಳ್ಳಲಾಗಿರುವ ಕಟ್ಟಡಗಳು ಮತ್ತು ನಿವೇಶನಗಳಿಗೆ ಬದಲಾಗಿ ವಿತರಿಸಿರುವ ಟಿಡಿಆರ್‌ ವ್ಯವಹಾರದಲ್ಲಿ ಭಾರಿ ಅಕ್ರಮ ನಡೆದಿರುವುದನ್ನು ಎಸಿಬಿ ತನಿಖೆ ಪತ್ತೆ ಹಚ್ಚಿದೆ. ಈ ಸಂಬಂಧ ಮೊದಲ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ಇನ್ನೂ ಕೆಲವು ದೂರುಗಳನ್ನು ಆಧರಿಸಿ, ನಿವೃತ್ತ ಜಂಟಿ ನಿರ್ದೇಶಕ (ನಗರ ಯೋಜನೆ) ಎಸ್‌.ಎಸ್‌. ಟೊಪಗಿ, ನಿವೃತ್ತ ಮುಖ್ಯ ಎಂಜಿನಿಯರ್‌ ರಾಮೇಗೌಡ, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ (ಸ್ಟೇಟ್‌ ಅಕೌಂಟ್ಸ್‌) ವೆಂಕಟೇಶಪ್ಪ, ನಿವೃತ್ತ ಮುಖ್ಯ ಎಂಜಿನಿಯರ್‌ (ಯೋಜನೆ) ಎ.ಎಂ.ರಂಗನಾಥ್, ನಿವೃತ್ತ ಕಾರ್ಯಪಾಲಕ ಎಂಜಿನಿಯರ್‌ (ರಸ್ತೆ ವಿಸ್ತರಣೆ) ಚನ್ನಯ್ಯ ಮತ್ತಿತರ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ಹಾಕಲು ಅನುಮತಿ ನೀಡುವಂತೆ ಎಸಿಬಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ತಿಂಗಳು ಕಳೆದರೂ ಸರ್ಕಾರ (ಸಕ್ಷಮ ಪ್ರಾಧಿಕಾರ) ಒಪ್ಪಿಗೆ ಕೊಟ್ಟಿಲ್ಲ. ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿದರೆ ಕೆಲವು ರಿಯಲ್‌ ಎಸ್ಟೇಟ್‌ ಉದ್ಯಮಗಳು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಒ‍ಪ್ಪಿಗೆ ನೀಡದಂತೆ ತೆರೆಮರೆಯಲ್ಲಿ ಒತ್ತಡ ಹೇರಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

‘ಬಿಡಿಎ ಎಇಇ ಕೃಷ್ಣಲಾಲ್‌ ಪ್ರಮುಖ ಆರೋಪಿ ಆಗಿರುವ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸುವುದಷ್ಟೇ ಬಾಕಿ ಉಳಿದಿದೆ. ಈ ಹಂತದಲ್ಲಿ ಚಂದ್ರಶೇಖರ್‌ ಮತ್ತು ಸಂಜೀವ ಪಾಟೀಲ ಅವರನ್ನು ಬದಲಾವಣೆ ಮಾಡಿರುವುದರಿಂದ ಈ ಹಗರಣದ ತನಿಖೆ ಮುಂದುವರಿಯುವ ಕುರಿತು ಸಂಶಯ ಮೂಡಿದೆ’ ಎಂದೂ ಮೂಲಗಳು ಅಭಿಪ್ರಾಯಪಟ್ಟಿವೆ.

ಈ ಮಧ್ಯೆ, ಹಗರಣದ ಪೂರ್ಣ ಮಾಹಿತಿ ಕಲೆ ಹಾಕಿರುವ ಇ.ಡಿ ಅಧಿಕಾರಿಗಳು, ‘ಇಸಿಐಆರ್‌‘ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ‘ಇದೊಂದು ಭಾರಿ ಹಗರಣವಾಗಿದ್ದು, ತನಿಖೆ ಕೈಗೊಳ್ಳಲು ನಾವು ಉತ್ಸುಕವಾಗಿದ್ದೇವೆ. ಆದರೆ, ಎಸಿಬಿಯು ಕನಿಷ್ಠ ಮೂರ್ನಾಲ್ಕು ಎಫ್‌ಐಆರ್‌ಗಳನ್ನು ಎಸಿಬಿ ದಾಖಲಿಸಬೇಕು’ ಎಂದು ಇ.ಡಿ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರಭಾವಿಗಳು ಭಾಗಿ’

‘ಟಿಡಿಆರ್‌’ ಹಗರಣದಲ್ಲಿ ಕೆಲವು ಪ್ರಭಾವಿಗಳು ಭಾಗಿಯಾಗಿದ್ದಾರೆ. ಅವರನ್ನೂ ಎಸಿಬಿ ವಿಚಾರಣೆ ನಡೆಸಬೇಕಿದೆ. ಈತನಿಖೆಯ ದಿಕ್ಕು ತಪ್ಪಿಸಲು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಎಚ್‌.ಡಿ. ಕುಮಾರಸ್ವಾಮಿ ಒತ್ತಡಕ್ಕೆ ಮಣಿದಂತಿದೆ’ ಎಂದು ‘ಲಂಚ ಮುಕ್ತ ಕರ್ನಾಟಕ’ದ ಮುಖಂಡ ರವಿಕೃಷ್ಣ ರೆಡ್ಡಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.