ADVERTISEMENT

ಯಾರದ್ದೋ ಜಾಗಕ್ಕೆ ಇನ್ಯಾರಿಗೋ ಟಿಡಿಆರ್‌

ಹಗರಣ: ಎಂ.ಎನ್‌.ದೇವರಾಜ್‌ ವಿಚಾರಣೆಗೆ ಅನುಮತಿ

ಮಂಜುನಾಥ್ ಹೆಬ್ಬಾರ್‌
Published 10 ಸೆಪ್ಟೆಂಬರ್ 2020, 19:34 IST
Last Updated 10 ಸೆಪ್ಟೆಂಬರ್ 2020, 19:34 IST
ಬೆಂಗಳೂರು ನಗರ
ಬೆಂಗಳೂರು ನಗರ    

ಬೆಂಗಳೂರು: ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್) ನೀಡುವಲ್ಲಿ ಆಗಿರುವ ವಂಚನೆ ಪ್ರಕರಣದಲ್ಲಿ ಬಿಬಿಎಂಪಿಯ ಸಹಾಯಕ ಎಂಜಿನಿಯರ್‌ ಎಂ.ಎನ್‌.ದೇವರಾಜ್‌ ವಿರುದ್ಧ ತನಿಖೆ ನಡೆಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲೋಕೋಪಯೋಗಿ ಇಲಾಖೆ ಅನುಮತಿ ನೀಡಿದೆ.

ಫ್ರಾನ್ಸಿಸ್‌ ಸ್ಯಾಮ್‌ರಾಜ್‌ ಎಂಬುವರಿಗೆ ಸೇರಬೇಕಾದ ಜಾಗಕ್ಕೆ ಕಾನೂನುಬಾಹಿರವಾಗಿ ಅಕ್ಕಪ್ಪ ಎಂಬುವರಿಗೆ ಟಿಡಿಆರ್‌ ನೀಡಿದ ಆರೋಪ ದೇವರಾಜ್‌ ಮೇಲಿದೆ. ದೇವರಾಜ್‌ ಪ್ರಸ್ತುತ ಪಾಲಿಕೆಯ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ.

ಈ ಪ್ರಕರಣದ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸ್ಯಾಮ್‌ರಾಜ್‌ ದೂರು ನೀಡಿದ್ದರು. ಮಹದೇವಪುರ ವಲಯದ ಸಹಾಯಕ ಎಂಜಿನಿಯರ್‌ ಆಗಿದ್ದ ದೇವರಾಜ್‌ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣ ಸಮಗ್ರ ತನಿಖೆಗೆ ಅನುಮತಿ ನೀಡುವಂತೆ ಎಸಿಬಿ ಕೋರಿತ್ತು.

ADVERTISEMENT

ಏನಿದು ಪ್ರಕರಣ: ಕೆ.ಆರ್‌.ಪುರ ಹೋಬಳಿಯ ಕಲ್ಕೆರೆ ಗ್ರಾಮದ ಸರ್ವೆ ಸಂಖ್ಯೆ 576ರ 1 ಎಕರೆ 14 ಗುಂಟೆ ಜಾಗವನ್ನು ಫ್ರಾನ್ಸಿಸ್‌ ಸ್ಯಾಮ್‌ರಾಜ್ ಅವರು ದಾಸಪ್ಪ ಎಂಬುವರಿಂದ (ಎಂ.ಆರ್.ನಂಬರ್‌ 28/94–95) ಖರೀದಿಸಿದ್ದರು. ಕೆ.ಆರ್‌.ಪುರ ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ 2005ರಲ್ಲಿ ನೋಂದಣಿಯಾಗಿತ್ತು.

ಬಳಿಕ ತಂದೆ ಅನಾರೋಗ್ಯಪೀಡಿತರಾಗಿದ್ದರಿಂದ ಫ್ರಾನ್ಸಿಸ್‌ ಅವರು ಹೊಸೂರಿನಲ್ಲಿ ವಾಸವಾಗಿದ್ದರು. ಈ ನಡುವೆ, ಚನ್ನಸಂದ್ರದಿಂದ ಹೆಣ್ಣೂರು ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಪಾಲಿಕೆ ಮುಂದಾಗಿತ್ತು. ಈ ವೇಳೆ,
ಆಸ್ತಿ ಮಾಲೀಕರಿಗೆ ಟಿಡಿಆರ್‌ ನೀಡಲು ತೀರ್ಮಾನಿಸಿತ್ತು. ಅಕ್ಕಪ್ಪ ಎಂಬುವರು ಸರ್ವೆ ಸಂಖ್ಯೆ 576ರಲ್ಲಿ 03.02 ಗುಂಟೆ ಜಮೀನು ಹೊಂದಿದ್ದು, ಈ ಜಾಗದಲ್ಲಿ 15 ಅಡಿ ಮಾತ್ರ ರಸ್ತೆಗೆ ಉಪಯೋಗವಾಗಿರುತ್ತದೆ. ಆದರೆ,
ಅಕ್ಕಪ್ಪ ಅವರು ಎಂ.ಎನ್‌.ದೇವರಾಜ್‌ ಅವರ ಸಹಾಯ ಪಡೆದು ಫ್ರಾನ್ಸಿಸ್‌ ಅವರಿಗೆ ಸೇರಿದ ಜಮೀನನ್ನು ಸೇರಿಸಿಕೊಂಡು ಒಟ್ಟು 7.14 ಗುಂಟೆ ಜಮೀನಿಗೆ (722.50 ಚದರ ಮೀಟರ್‌) ಹಾಗೂ ಆ ಜಾಗದಲ್ಲಿ ನಿರ್ಮಿಸಿದ ಕಟ್ಟಡಕ್ಕೆ (2463.26 ಚದರ ಮೀಟರ್‌) ಟಿಡಿಆರ್‌ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.