ADVERTISEMENT

ಚಹಾ ಮಾರಿ ಉದ್ಯೋಗ ಸೃಷ್ಟಿಸಿ!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 19:36 IST
Last Updated 23 ಫೆಬ್ರುವರಿ 2020, 19:36 IST
ಮದನ್‌ ಪದಕಿ (ಬಲಬದಿ) ಮಾತನಾಡಿದರು. ಅಶ್ವಿನ್‌ ಚಂದ್ರಶೇಖರ್‌ ಇದ್ದಾರೆ -
ಮದನ್‌ ಪದಕಿ (ಬಲಬದಿ) ಮಾತನಾಡಿದರು. ಅಶ್ವಿನ್‌ ಚಂದ್ರಶೇಖರ್‌ ಇದ್ದಾರೆ -   

ಬೆಂಗಳೂರು: ಸರ್ಕಾರದಿಂದ ಸಹಾಯ ಪಡೆದಿಲ್ಲ. ಕಾರ್ಪೊರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಗೆ ಕೈಚಾಚಿಲ್ಲ.ಸಾಲಕ್ಕಾಗಿ ಬ್ಯಾಂಕುಗಳ ಮೊರೆ ಹೋಗಿಲ್ಲ. ಮಾಡಿದ್ದು ಚಹಾ ಮಾರಾಟ ಮಾತ್ರ. ಬಳಸಿಕೊಂಡಿದ್ದು ಶ್ರಮ ಮತ್ತು ಆತ್ಮವಿಶ್ವಾಸದ ‘ನಿಧಿ’ಯನ್ನು.

ಶರೋನ್‌ ಚಹಾ ಹೋಟೆಲ್‌ಗಳ ಮೂಲಕ 25 ಜನರಿಗೆ ಉದ್ಯೋಗ ಕಲ್ಪಿಸಿ
ರುವ ಶರೋನ್‌ ಡ್ಯಾನಿಯಲ್‌ ಅವರ ಕತೆ ಇದು.‘ಚಹಾದಿಂದ ಉದ್ಯೋಗ ಸೃಷ್ಟಿಯವರೆಗೆ’ ಕುರಿತ ಗೋಷ್ಠಿಯಲ್ಲಿ ಮದನ್‌ ಪದಕಿ ಈ ಬಗ್ಗೆ ಪ್ರಸ್ತಾಪಿಸಿದರು. ‘ಚಹಾ ಮಾರಾಟ ಮಾಡುವ ಮೂಲಕವೂ ಉದ್ಯಮ ಸೃಷ್ಟಿಸಬಹುದು ಎಂಬುದಕ್ಕೆ ಡ್ಯಾನಿಯಲ್‌ ಸಾಕ್ಷಿ’ ಎಂದರು.

‘ಕಾರ್ಪೊರೇಟ್‌ ಕಂಪನಿಗಳು ಹಾಗೂ ಮಧ್ಯಮ ಕೈಗಾರಿಕೆಗಳು ಮಾತ್ರ ಹೆಚ್ಚು ಉದ್ಯೋಗ ಸೃಷ್ಟಿಸುತ್ತವೆ ಎಂಬ ಭಾವನೆ ಇದೆ. ಇದು ಸರಿಯಲ್ಲ. ದೇಶದಲ್ಲಿ 11.7 ಕೋಟಿ ಮಂದಿ ಈ ವಲಯದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೆ, ದೇಶದ ಜಿಡಿಪಿಗೆ ಈ ಕ್ಷೇತ್ರದ ಕೊಡುಗೆ ಶೇ 6 ಮಾತ್ರ. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಸುವವರಿಗೆ ಆದ್ಯತೆ ನೀಡಬೇಕು. ಕಿರಾಣಿ ಅಂಗಡಿ, ಚಹಾ ಅಂಗಡಿಯಂತಹ ಸ್ಥಳೀಯ ಅಗತ್ಯಗಳನ್ನು ಪೂರೈಸುವ ಉದ್ಯಮ ಸ್ಥಾಪನೆ ಹೆಚ್ಚಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಚೀನಾದಲ್ಲಿ ಪ್ರತಿ ದಿನಕ್ಕೆ 18 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ನಮ್ಮಲ್ಲಿಯೂ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿವೆ. ಕೆಲಸ ಹುಡುಕುತ್ತಿದ್ದವರು ಕೆಲಸ ಕೊಡುವಂತಾಗಿದ್ದಾರೆ. ಶಿಕ್ಷಣಕ್ಕಿಂತ ಹೆಚ್ಚಾಗಿ ಅವರು ಹೊಂದಿರುವ ಕೌಶಲ ಮತ್ತು ಪರಿಶ್ರಮವೇ ಉದ್ಯಮ ಸ್ಥಾಪಿಸಲು ಅವರಿಗೆ ಪ್ರೇರಣೆಯಾಗಿದೆ’ ಎಂದು ಅಶ್ವಿನ್‌ ಚಂದ್ರಶೇಖರ್‌ ಹೇಳಿದರು.

‘ಬೀದಿ ಬದಿಯಲ್ಲಿ ಚಹಾ ಅಥವಾ ಬೋಂಡಾ ಅಂಗಡಿ ಇಟ್ಟರೆ, ಬಿಬಿಎಂಪಿಯ ಕೆಲವು ಅಧಿಕಾರಿಗಳು, ಕೆಲವು ಪೊಲೀಸರು ಹಾಗೂ ಸ್ಥಳೀಯ ರೌಡಿಗಳು ಹಫ್ತಾ ವಸೂಲಿ ಮಾಡುತ್ತಾರೆ ಎಂದು ವ್ಯಾಪಾರಿಗಳು ದೂರುತ್ತಾರೆ. ಸರ್ಕಾರ ನಿಗದಿ ಪಡಿಸಿದ ಎಲ್ಲ ಪರವಾನಗಿ ಪಡೆದಿದ್ದರೆ ಯಾರಿಗೂ ಹೆದರುವ, ಹಫ್ತಾ ನೀಡುವ ಅಗತ್ಯವಿರುವುದಿಲ್ಲ’ ಎಂದು ಪದಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.