ADVERTISEMENT

₹28 ಲಕ್ಷ ಸಾಲ, ಮಕ್ಕಳಿಲ್ಲವೆಂದು ಶಿಕ್ಷಕ ಶಂಕರಪ್ಪ ಆತ್ಮಹತ್ಯೆ - ಪೊಲೀಸ್ ಮೂಲ

ಶಿಕ್ಷಕ ಶಂಕರಪ್ಪ ಸಾವು ಪ್ರಕರಣ l ಮರಣಪತ್ರದಲ್ಲಿ ಸಾಲ ಕೊಡಿಸಿದ್ದ ಮಹಿಳೆ ಹೆಸರು ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:16 IST
Last Updated 24 ಫೆಬ್ರುವರಿ 2023, 22:16 IST
ಶಂಕರಪ್ಪ
ಶಂಕರಪ್ಪ   

ಬೆಂಗಳೂರು: ಮೆಜೆಸ್ಟಿಕ್– ಮಲ್ಲೇಶ್ವರ ಮಾರ್ಗದ ಹಳಿಯ ಮೇಲೆ ರೈಲು ಹರಿದು ಮೃತಪಟ್ಟಿರುವ ಶಿಕ್ಷಕ ಶಂಕರಪ್ಪ ಬೋರೆಡ್ಡಿ (47) ಅವರದ್ದು ಆತ್ಮಹತ್ಯೆ ಎಂಬುದು ತನಿಖೆಯಿಂದ ಗೊತ್ತಾಗಿದ್ದು, ಅವರು ಬರೆದಿದ್ದಾರೆ ಎನ್ನಲಾದ ಎರಡು ಪುಟಗಳ ಮರಣಪತ್ರ ಪೊಲೀಸರಿಗೆ ಲಭ್ಯವಾಗಿದೆ.

‘ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಶಂಕರಪ್ಪ, ರಾಯಚೂರು ಜಿಲ್ಲೆಯ ಸಿಂಧನೂರಿನ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ವರು ಸಹೋದ್ಯೋಗಿಗಳ ಜೊತೆ ಇತ್ತೀಚೆಗೆ ನಗರಕ್ಕೆ ಬಂದಿದ್ದ ಶಂಕರಪ್ಪ, ಸ್ವಾತಂತ್ರ್ಯ ಉದ್ಯಾನದಲ್ಲಿ ಅನುದಾನಿತ ಶಾಲಾ- ಕಾಲೇಜುಗಳ ನೌಕರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಂಗಳ
ವಾರ (ಫೆ. 21) ರಾತ್ರಿ ತಮ್ಮೂರಿಗೆ ವಾಪಸು ಹೋಗುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ರೈಲ್ವೆ ಪೊಲೀಸರು ತಿಳಿಸಿದರು.

‘ಹಳಿ ಮೇಲೆ ಶಂಕರಪ್ಪ ಮೃತದೇಹ ಸಿಕ್ಕಿದೆ. ಜೇಬಿನಲ್ಲಿ ಎರಡು ಪುಟಗಳ ಮರಣ ಪತ್ರ ಪತ್ತೆಯಾಗಿದೆ’ ಎಂದು ಹೇಳಿದರು.

ADVERTISEMENT

₹ 35 ಲಕ್ಷ ಸಾಲ ಪಡೆದಿದ್ದ ಶಿಕ್ಷಕ: ‘ಬೆಂಗಳೂರಿನ ನಂದಿನಿ ಎಂಬುವವರು ಕೆಲ ವರ್ಷಗಳ ಹಿಂದೆ ಶಿಕ್ಷಕ ಶಂಕರಪ್ಪ ಮೊಬೈಲ್‌ಗೆ ಕರೆ ಮಾಡಿದ್ದರು. ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸಾಲ ಕೊಡಿಸುವುದಾಗಿ ಹೇಳಿದ್ದರು. ಅದಕ್ಕೆ ಒಪ್ಪಿದ್ದ ಶಂಕರಪ್ಪ, ನಂದಿನಿ ಭೇಟಿಯಾಗಿದ್ದರು. ಈ ಸಂಗತಿ ಮರಣಪತ್ರದಲ್ಲಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದಾಖಲೆ ಪಡೆದಿದ್ದ ನಂದಿನಿ, ಎರಡೂ ಬ್ಯಾಂಕ್‌ಗಳಿಂದ ₹ 35 ಲಕ್ಷ ಸಾಲ ಮಂಜೂರು ಮಾಡಿಸಿದ್ದರು. ಆರ್ಥಿಕ ಸಂಕಷ್ಟವಿರುವುದಾಗಿ ಹೇಳಿದ್ದ ಮಹಿಳೆ, ಶಂಕರಪ್ಪ ಅವರಿಂದ ₹ 35 ಲಕ್ಷದಲ್ಲಿ ₹ 28 ಲಕ್ಷವನ್ನು ಸಾಲ ಪಡೆದಿದ್ದರು.’

‘ಸಾಲ ವಾಪಸು ನೀಡಲು ನಂದಿನಿ ವಿಳಂಬ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಿದ್ದ ಶಂಕರಪ್ಪ, ಪತ್ನಿ ಜೊತೆ ಮಹಿಳೆಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಾಲವನ್ನು ತ್ವರಿತವಾಗಿ ವಾಪಸು ನೀಡುವಂತೆ ತಾಕೀತು ಮಾಡಿದ್ದರು. ಅದಕ್ಕೆ ಒಪ್ಪಿದ್ದ ನಂದಿನಿ, ಸ್ವಲ್ಪ ಸ್ವಲ್ಪ ಹಣವನ್ನು ಪ್ರತಿ ತಿಂಗಳು ನೀಡುತ್ತಿದ್ದರು. ಆದರೆ, ಸಾಲದ ಸಂಪೂರ್ಣ ಕಂತು ತುಂಬುವುದು ಶಂಕರಪ್ಪ ಅವರಿಗೆ ಹೊರೆ
ಯಾಗಿತ್ತು. ಈ ಅಂಶವೂ ಪತ್ರದಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

‘ಶಂಕರಪ್ಪ ಮದುವೆಯಾಗಿ 16 ವರ್ಷವಾಗಿತ್ತು. ಅವರಿಗೆ ಮಕ್ಕಳು ಇರಲಿಲ್ಲ. ಈ ಸಂಗತಿಯನ್ನು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ‘ಹಲವು ಕಾರಣಗಳಿಂದ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ’ ಎಂದಿದ್ದಾರೆ’ ಎಂದು ಮೂಲ ಹೇಳಿದೆ.

ನಂದಿನಿ ವಿಚಾರಣೆ: ‘ಶಂಕರಪ್ಪ ಪತ್ನಿಗೂ ನಂದಿನಿ ಪರಿಚಿತರು. ಹಲವು ಬಾರಿ ಭೇಟಿಯಾಗಿದ್ದಾರೆ. ಆದರೆ, ವಿಳಾಸ ಗೊತ್ತಿಲ್ಲ. ಸಹೋದ್ಯೋಗಿಗಳ ಹೇಳಿಕೆ ಹಾಗೂ ಮರಣಪತ್ರದಲ್ಲಿರುವ ಮಾಹಿತಿ ಆಧರಿಸಿ ಅವರ ವಿಚಾರಣೆ ನಡೆಸ
ಬೇಕಿದೆ. ವಿಳಾಸ ಪತ್ತೆ ಮಾಡಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.