ADVERTISEMENT

ಶಿಕ್ಷಕರ ನೇಮಕಾತಿ ನಿಯಮ ಬದಲಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 22:25 IST
Last Updated 22 ಜನವರಿ 2020, 22:25 IST

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರ ನೇಮಕಾತಿ ನಿಯಮಗಳನ್ನು ಸಡಿಲಗೊಳಿಸಿ, ಶಿಕ್ಷಕರ ಕೊರತೆ ನೀಗಿಸಲು ಕ್ರಮಕೈಗೊಳ್ಳುವಂತೆಜೆಡಿಎಸ್ ವಕ್ತಾರ ರಮೇಶ್ ಬಾಬು ಬುಧವಾರ ಒತ್ತಾಯಿಸಿದರು.

ವಿಷಯ ಪರೀಕ್ಷೆಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಪಡೆದವರನ್ನು ಮಾತ್ರ ಶಿಕ್ಷಕರನ್ನಾಗಿ ಆಯ್ಕೆಮಾಡುವ ನಿಯಮ ರೂಪಿಸಿರುವುದು ನೇಮಕಾತಿಗೆ ತೊಡಕಾಗಿದೆ. ಕೇಂದ್ರ ಲೋಕಸೇವಾ ಆಯೋಗವು ಐಎಎಸ್, ಐಪಿಎಸ್‌ ನಂತಹ ಹುದ್ದೆಗಳನ್ನು ರ‍್ಯಾಂಕಿಂಗ್ ಆಧಾರದ ಮೇಲೆ ಆಯ್ಕೆ ಮಾಡುತ್ತಿದೆ. ಅದೇ ಮಾದರಿಯನ್ನು ಶಿಕ್ಷಕರ ಆಯ್ಕೆಗೂ ಅನುಸರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರತಿ ವರ್ಷ 4 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಪಡೆದುಕೊಳ್ಳಲಾಗಿದ್ದು, ಈವ ರೆಗೆ 18 ಸಾವಿರ ಶಿಕ್ಷಕರನ್ನು ಭರ್ತಿ ಮಾಡಬೇಕಿತ್ತು. ಹೊಸ ನಿಯಮಾವಳಿಯಿಂದಾಗಿ ಖಾಲಿ ಇರುವ ಹುದ್ದೆಗಳಿಗೆ ನೇಮಕಮಾಡಲು ಸಾಧ್ಯವಾಗಿಲ್ಲ. ಈಗಾಗಲೇ ಶಿಕ್ಷಕರ ಆಯ್ಕೆಗೆ ಪರೀಕ್ಷೆ ಬರೆದವರು ಅವಕಾಶಕ್ಕಾಗಿ ಕಾಯುತ್ತಿದ್ದು, ಅವರನ್ನು ರ್‍ಯಾಂಕಿಂಗ್ ಆಧಾರದ ಮೇಲೆ ನೇಮಿಸಿಕೊಳ್ಳಲು ಸಹಕಾರಿಯಾಗುವಂತೆ ನಿಯಮ ಬದಲಾವಣೆ ಮಾಡಬೇಕು ಎಂದು ಹೇಳಿದರು.

ADVERTISEMENT

ಇಲಾಖೆ ಅರ್ಥಮಾಡಿಕೊಳ್ಳುವಲ್ಲಿ ಸಚಿವರು ವೈಫಲ್ಯ ಕಂಡಿದ್ದು, ಇಲಾಖೆ ಅಧಿಕಾರಿಗಳ ಜತೆಗೆ ಸಮನ್ವಯತೆ ಇಲ್ಲವಾಗಿದೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಅಂತಿಮ ಘಟ್ಟವಾಗಿದ್ದರೂ ಮಧ್ಯದಲ್ಲಿ ಬರುವ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು ಎಂಬ ಗೊಂದಲಕಾರಿ ಹೇಳಿಕೆ ನೀಡಿದರು. ಶಿಕ್ಷಕರ ವರ್ಗಾವಣೆ ವಿಚಾರದಲ್ಲೂ ಇಂತಹುದೇ ಹೇಳಿಕೆ ಕೊಟ್ಟಿದ್ದರು ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.