ಬೆಂಗಳೂರು: ಉತ್ತರ ಪ್ರದೇಶದ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಮಾರತ್‌ಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆ ರೋಚಕ ಹಾಗೂ ರಹಸ್ಯವಾಗಿತ್ತು.
ಕರೆಯೊಂದನ್ನು ಆಧರಿಸಿ ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ ಅವರನ್ನು ಹರಿಯಾಣದ ಗುರುಗ್ರಾಮದ ಪಿ.ಜಿಯಲ್ಲಿ ಬಂಧಿಸಿದ್ದರೆ, ಅವರ ತಾಯಿ ನಿಶಾ ಸಿಂಘಾನಿಯಾ ಹಾಗೂ ಸಹೋದರ ಅನುರಾಗ್ ಸಿಂಘಾನಿಯಾ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರಾಮೇಶ್ವರ ಹೋಟೆಲ್ ಬಳಿ ಡಿ.14ರಂದು ಬಂಧಿಸಿದ್ದರು.
ಆರೋಪಿಗಳು ಪದೇ ಪದೇ ಸ್ಥಳ ಬದಲಾವಣೆ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡುತ್ತಿದ್ದರು. ಇದರಿಂದ ಕಾರ್ಯಾಚರಣೆಗೆ ತೆರಳಿದ್ದ ಪೊಲೀಸರಿಗೆ ಆರೋಪಿಗಳ ಪತ್ತೆ ಹಾಗೂ ಬಂಧನ ಸವಾಲಾಗಿತ್ತು. ಕೊನೆಗೆ ಒಂದು ಕರೆಯ ಜಾಡು ಹಿಡಿದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಸಂಬಂಧಿಕರೊಬ್ಬರು ಜಾಮೀನು ಅರ್ಜಿ ಸಲ್ಲಿಕೆ ಸಂಬಂಧ ನಿಖಿತಾ ಹಾಗೂ ಆಕೆಯ ತಾಯಿ ನಿಶಾ ಅವರನ್ನು ಅವರ ಸಂಪರ್ಕಿಸಿದ್ದರು. ಕೂಡಲೇ ಆ ಇಬ್ಬರ ಮೊಬೈಲ್ ಕರೆಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದರು. ತನ್ನ ಸಂಬಂಧಿಗೆ ಶುಕ್ರವಾರ ರಾತ್ರಿ ನಿಖಿತಾ ಕರೆ ಮಾಡಿ ಮಾತನಾಡಿದ್ದರು. ಈ ಕರೆ ನೀಡಿದ ಸುಳಿವು ಆಧರಿಸಿ ಕೂಡಲೇ ಕಾರ್ಯಾಚರಣೆಗೆ ಇಳಿದ ಪೊಲೀಸರು, ಮೂವರನ್ನೂ ಬಂಧಿಸಿ ನಗರಕ್ಕೆ ಕರೆ ತಂದಿದ್ದರು.
ಅತುಲ್ ಆತ್ಮಹತ್ಯೆ ಬಳಿಕ ಬಂಧನದ ಭೀತಿಯಿಂದ ಆರೋಪಿಗಳು ಹೊರ ರಾಜ್ಯಕ್ಕೆ ಪರಾರಿ ಆಗಿದ್ದರು. ಪದೇ ಪದೇ ಸ್ಥಳ ಬದಲಾವಣೆ ಮಾಡುತ್ತಿದ್ದರು.
ಮಾರತ್‌ಹಳ್ಳಿ ಇನ್‌ಸ್ಪೆಕ್ಟರ್ ಪಿ.ಎನ್.ಅನಿಲ್ ಕುಮಾರ್ ಉಸ್ತುವಾರಿಯಲ್ಲಿ ಪಿಎಸ್‌ಐಗಳಾದ ರಂಜಿತ್, ಚೇತನ್, ಜ್ಞಾನದೇವ ಹಾಗೂ ವಿದ್ಯಾ ಅವರ ಸಾರಥ್ಯದಲ್ಲಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಹರಿಯಾಣ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಈ ತಂಡಗಳು ರಹಸ್ಯ ಕಾರ್ಯಾಚರಣೆ ನಡೆಸಿದ್ದವು. ಐದು ದಿನ ಕಾರ್ಯಾಚರಣೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.