ಬೆಂಗಳೂರಿನ ಟೆಕಿ ಆತ್ಮಹತ್ಮೆ: ಅತುಲ್ ಪತ್ನಿ, ಆಕೆಯ ತಾಯಿ ಮತ್ತು ಸಹೋದರನ ಬಂಧನ
(ಚಿತ್ರ ಕೃಪೆ: X/@prajwaldza)
ಬೆಂಗಳೂರು: ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಅವರ ಪತ್ನಿ ಸೇರಿದಂತೆ ಮೂವರನ್ನು ಮಾರತ್‌ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅತುಲ್ ಪತ್ನಿ ನಿಖಿತಾ ಸಿಂಘಾನಿಯರನ್ನು ಹರಿಯಾಣದ ಗುರುಗ್ರಾಮದ ಪಿ.ಜಿಯಲ್ಲಿ ಬಂಧಿಸಿದರೆ, ತಾಯಿ ನಿಶಾ ಸಿಂಘಾನಿಯಾ ಹಾಗೂ ಸಹೋದರ ಅನುರಾಗ್ ಸಿಂಘಾನಿಯ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ರಾಮೇಶ್ವರ ಹೋಟೆಲ್ ಬಳಿ ಬಂಧಿಸಿ, ಶನಿವಾರ ರಾತ್ರಿ ನಗರಕ್ಕೆ ಕರೆತರಲಾಗಿದೆ.
ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹದಿನಾಲ್ಕು ದಿನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಮತ್ತೊಬ್ಬ ಆರೋಪಿ ಸುಶೀಲ್ ಸಿಂಘಾನಿಯಾ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರತ್‌ಹಳ್ಳಿ ಠಾಣೆ ಪೊಲೀಸರು ಅತುಲ್ ಪತ್ನಿ ನಿಖಿತಾ ಮತ್ತು ಇತರೆ ಆರೋಪಿಗಳಿಗಾಗಿ ಎರಡು ದಿನ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಹಾಗಾಗಿ ಉತ್ತರ ಪ್ರದೇಶದ ಜೌನ್‌ಪುರದಲ್ಲಿರುವ ನಿಖಿತಾ ಮನೆ ಬಾಗಿಲಿಗೆ ಡಿಸೆಂಬರ್ 13ರಂದು ಸಮನ್ಸ್ ಅಂಟಿಸಿ, ಮೂರು ದಿನದೊಳಗಾಗಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು.
ತಲೆಮರೆಸಿಕೊಂಡಿದ್ದ ನಿಖಿತಾ ಸೇರಿ ಎಲ್ಲ ಆರೋಪಿಗಳು ಅಲಹಾಬಾದ್ ಹೈಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮೊಬೈಲ್ಗಳನ್ನು ಸ್ವಿಚ್ ಆಪ್ ಮಾಡಿಕೊಂಡು ಸ್ನೇಹಿತರ ನೆರವು ಪಡೆದು ಆರೋಪಿಗಳು ಪದೇ ಪದೇ ವಾಸ ಸ್ಥಳ ಬದಲಿಸುತ್ತಿದ್ದರು. ಸ್ಥಳೀಯ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸುವಲ್ಲಿ ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.
‘ಅತುಲ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅತುಲ್ ಅವರ ನಾಲ್ಕು ವರ್ಷದ ಮಗು ನಿಖಿತಾ ಅವರ ಸಂಬಂಧಿಕರ ಬಳಿ ಇದೆ. ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ಮಾಡಲಾಗುತ್ತಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಶಿವಕುಮಾರ್ ಗುಣಾರೆ ತಿಳಿಸಿದರು.
ಮಾರತ್‌ಹಳ್ಳಿಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅತುಲ್ ಸುಭಾಷ್, ಪತ್ನಿ ಹಾಗೂ ಆಕೆಯ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಡಿಸೆಂಬರ್ 9ರಂದು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅತುಲ್ ಅವರ ಲ್ಯಾಪ್‌ಟಾಪ್, ಮೊಬೈಲ್ ಪಾಸ್‌ವರ್ಡ್ ಪತ್ತೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಆತ್ಮಹತ್ಯೆಗೂ ಮುನ್ನ ಅತುಲ್ ಸುಭಾಷ್ 90 ನಿಮಿಷಗಳ ವಿಡಿಯೊ ಮಾಡಿದ್ದರು. 'ಭಾರತದಲ್ಲಿ ನರಮೇಧ ನಡೆಯುತ್ತಿದೆ. ಜನರನ್ನು ರಕ್ಷಿಸಿ ವಾಕ್ ಸ್ವಾತಂತ್ರ್ಯ ಮರುಸ್ಥಾಪಿಸಿ' ಎಂದು ಮನವಿ ಮಾಡಿದ್ದರಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಟೆಸ್ಲಾ ಕಂಪನಿ ಸಿಇಒ ಇಲಾನ್ ಮಸ್ಕ್ ಅವರ ನೆರವನ್ನು ಕೇಳಿದ್ದರು.
‘ವರದಕ್ಷಿಣೆ ಕಿರುಕುಳ ಕಾನೂನು ದುರ್ಬಳಕೆಯ ಬಗ್ಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಚರ್ಚೆಯಾಗಬೇಕು. ದೇಶ ಹಾಗೂ ರಾಜ್ಯದ ಕಾನೂನಿನಲ್ಲಿಯೂ ಬದಲಾವಣೆ ಆಗಬೇಕಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಅಭಿಪ್ರಾಯಪಟ್ಟರು. ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಸುಭಾಷ್ ಅವರ ಪತ್ನಿ ನಿಖಿತಾ ಅತ್ತೆ ನಿಶಾ ಮತ್ತು ಬಾಮೈದ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ‘ಮಹಿಳೆಯರಿಗಿರುವ ಕಾನೂನು ದುರ್ಬಳಕೆ ಆಗಿದೆ ಎಂಬುದೂ ಸೇರಿದಂತೆ ಅನೇಕ ವಿಚಾರಗಳನ್ನು ಅತುಲ್ ಮರಣಪತ್ರದಲ್ಲಿ ಬರೆದಿದ್ದಾರೆ. ಕಾನೂನಿನಲ್ಲಿರುವ ಅಂಶಗಳು ಗಂಡಂದಿರಿಗೆ ತೊಂದರೆ ಆಗುತ್ತಿವೆ ಎಂಬುದು ಆರೋಪ. ಇದು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರಿಗೆ ನೀಡಿರುವ ಹಕ್ಕು ದುರ್ಬಳಕೆ ಆಗುತ್ತಿದೆ ಎನ್ನುವ ಕೂಗು ಕೇಳಿ ಬಂದಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.