ಬೆಂಗಳೂರು: ಅತಿ ಹೆಚ್ಚು ಜನಸಂಖ್ಯೆ ಇರುವ ಹಾಗೂ ಸಾಮಾಜಿಕ ಅಸಮಾನತೆ ಹೊಂದಿರುವ ಭಾರತದಲ್ಲಿ ಸಮುದಾಯದ ಅಭಿವೃದ್ಧಿ ಯೋಜನೆಗಳು ನಿರ್ದಿಷ್ಟ ಜನರಿಗೆ ಶೀಘ್ರ ತಲುಪಲು ತಂತ್ರಜ್ಞಾನದ ಬಳಕೆ ಅಗತ್ಯವಾಗಿದೆ ಎಂದು ಅಂತರರಾಷ್ಟ್ರೀಯ ಸಾಮಾಜಿಕ ಕಾರ್ಯಕರ್ತರ ಒಕ್ಕೂಟದ ಪದಾಧಿಕಾರಿ ಎಂ.ವಿ. ಶ್ರೀಗಣೇಶ್ ಪ್ರತಿಪಾದಿಸಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು) ಮತ್ತು ಭಾರತೀಯ ವೃತ್ತಿಪರ ಸಮಾಜ ಕಾರ್ಯ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜ ಸೇವೆಗಳ ತ್ವರಿತ ಅನುಷ್ಠಾನ ಮತ್ತು ಸರ್ಕಾರದ ನೀತಿ ನಿರೂಪಣೆಯಲ್ಲಿ ತಂತ್ರಜ್ಞಾನ ಪರಿಣಾಮಕಾರಿ ಸಾಧನವಾಗಿದೆ’ ಎಂದು ಅವರು ಪ್ರತಿಪಾದಿಸಿದರು.
‘ದತ್ತಾಂಶ ಸಂಗ್ರಹ ಮತ್ತು ತಾಂತ್ರಿಕ ಪರಿಣತಿಯ ಮೂಲಕ ಸಮಾಜ ಕಾರ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿದೆ’ ಎಂದು ಅವರು ವಿಶ್ಲೇಷಿಸಿದರು.
ವಿಶ್ರಾಂತ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಮಾತನಾಡಿ, ‘ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಬೋಧನೆ ಮತ್ತು ಕಲಿಕೆಯ ವಿಧಾನಗಳನ್ನು ಸೂಕ್ತ ರೀತಿಯಲ್ಲಿ ಮಾರ್ಪಡಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದಲ್ಲಿ ಪ್ರೊ. ಐ.ಎ.ಷರೀಫ್, ಪ್ರೊ.ಎಲ್.ಎಸ್. ಗಾಂಧಿದಾಸ್ ಸಮಾಜ ಕಾರ್ಯ ಕ್ಷೇತ್ರದಲ್ಲಿನ ಹೊಸ ಸವಾಲುಗಳ ಕುರಿತು ವಿಶ್ಲೇಷಿಸಿದರು. ವಿವಿಧ ಕ್ಷೇತ್ರಗಳ ವಿಷಯ ಪರಿಣತರು ವಿಶೇಷ ಉಪನ್ಯಾಸಗಳನ್ನು ನೀಡಿದರು. ಬಿಸಿಯು ಕುಲಸಚಿವ ಪ್ರೊ.ಬಿ. ರಮೇಶ್, ಪ್ರೊ.ರಿತಿಕಾ ಸಿನ್ಹಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.