ADVERTISEMENT

ವಿದ್ಯುತ್‌ ವಾಹನ ಉತ್ಪಾದನೆ: ₹ 350 ಕೋಟಿ ಹೂಡಿಕೆಗೆ ಮುಂದಾದ ಟೆಕೊ

55 ಸಾವಿರ ಮಂದಿಗೆ ಸಿಗಲಿದೆ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:45 IST
Last Updated 30 ಜನವರಿ 2019, 19:45 IST
ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಿದ್ಯುತ್ ಚಾಲಿತ ವಾಹನಗಳು– ಪ್ರಜಾವಾಣಿ ಚಿತ್ರ
ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಿದ್ಯುತ್ ಚಾಲಿತ ವಾಹನಗಳು– ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನ ಕ್ಷೇತ್ರದಲ್ಲಿ ₹ 350 ಕೋಟಿ ಹೂಡಿಕೆಗೆ ಕೊರಿಯಾದ ಟೆಕೊ ಎಲೆಕ್ಟ್ರಿಕ್‌ ಕಂಪನಿ ಮುಂದೆ ಬಂದಿದೆ. ಬುಧವಾರ ಇಲ್ಲಿ ನಡೆದ ವಿದ್ಯುತ್‌ ವಾಹನ ಶೃಂಗ ಸಭೆಯಲ್ಲಿ ಕಂಪನಿಯ ಅಧ್ಯಕ್ಷ ಜಾರ್ಜ್‌ ಲಿನ್‌ ಈ ಇಂಗಿತ ವ್ಯಕ್ತಪಡಿಸಿದರು.

ಭಾರತೀಯ ವಾಣಿಜ್ಯ ಸಂಸ್ಥೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಶ್ರಯದಲ್ಲಿ ಈ ಶೃಂಗ ಸಭೆ ನಡೆಯಿತು.

ಕಂಪನಿ ಈಗಾಗಲೇ ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ‘ಸೆಂಚುರಿ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌’ನ ಹೆಸರಿನ ಘಟಕ ಹೊಂದಿದೆ. ವಿದ್ಯುತ್‌ ವಾಹನಗಳ ತಯಾರಿಕೆ, ನಿರ್ವಹಣೆ, ಸಂಶೋಧನೆ ಮತ್ತು ಅಭಿವೃದ್ಧಿ ಇಲ್ಲಿ ನಡೆಯಲಿದೆ ಎಂದು ಕೈಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ADVERTISEMENT

‘ದೇಶದಲ್ಲಿ ಒಟ್ಟಾರೆ ₹ 2 ಲಕ್ಷ ಕೋಟಿ ಮೊತ್ತವನ್ನು ವಿದ್ಯುತ್‌ ವಾಹನ ಕ್ಷೇತ್ರದಲ್ಲಿ ಹೂಡಿಕೆ ಮಾಡಲಾಗುತ್ತದೆ. ರಾಜ್ಯದಲ್ಲಿ ₹ 30 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತದೆ. ಇದು 55 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲಿದೆ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

‘ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಮೂರು ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಬೇಕು’ ಎಂದು ಸಚಿವರು ಆಶಿಸಿದರು.

ವಿದ್ಯುತ್‌ ವಾಹನಗಳ ತಯಾರಿಕಾ ಘಟಕಗಳಿಗೆ ಬೇಕಾದ ಮೂಲಸೌಲಭ್ಯ ಒದಗಿಸುವುದು, ತ್ರಿಚಕ್ರ ವಾಹನಗಳನ್ನು ಖಾಸಗಿ ಬಳಕೆಗೂ (ಸ್ವಂತ ಬಳಕೆಗೆ) ನೀಡುವುದು, ವಾಣಿಜ್ಯ ವಾಹನಗಳನ್ನು ತೆರಿಗೆ ಮುಕ್ತಗೊಳಿಸುವುದು, ಚಾರ್ಜಿಂಗ್‌ ಪಾಯಿಂಟ್‌ಗಳ ವಿಸ್ತರಣೆ, ಅದಕ್ಕಾಗಿ ವಿದ್ಯುತ್‌ ಪ್ರಸರಣ ಕಂಪನಿಗಳ ಸಹಯೋಗ, ಬಿಡಿ ಭಾಗಗಳ ಬೆಲೆ ಇಳಿಕೆ, ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಅಧಿಕಾರಿಗಳು ಹೂಡಿಕೆದಾರರಿಗೆಮಾಹಿತಿ ನೀಡಿದರು.

**

ವಾಹನಗಳ ಪ್ರದರ್ಶನ

ಶೃಂಗಸಭೆಯಲ್ಲಿ ನಗರದಲ್ಲೇ ಆರಂಭವಾದ ಸನ್‌ ಮೊಬಿಲಿಟಿ ಕಂಪನಿಯು ಬ್ಯಾಟರಿ ಸ್ವಾಪಿಂಗ್‌ ಘಟಕ ಪ್ರದರ್ಶಿಸಿತು. ವಾಹನದ ಬ್ಯಾಟರಿ ಚಾರ್ಜ್‌ ಖಾಲಿಯಾದ ಬಳಿಕ ಅದನ್ನು ಈ ಘಟಕಕ್ಕೆ ನೀಡಬೇಕು. ಅಲ್ಲಿ ಪೂರ್ಣ ಚಾರ್ಜ್‌ ಆದ ಬ್ಯಾಟರಿಯನ್ನು ವಿನಿಮಯ ಮಾಡಲಾಗುತ್ತದೆ. ಇದಕ್ಕೆ ಘಟಕದವರು ಕನಿಷ್ಠ ದರ ವಿಧಿಸುತ್ತಾರೆ.

ಪೆಟ್ರೋಲ್‌ ಬಂಕ್‌ಗಳ ಮಾದರಿಯಲ್ಲಿ ಎಲ್ಲ ಕಡೆ ಈ ಸ್ವಾಪಿಂಗ್‌ ಘಟಕಗಳು ಇರಲಿವೆ. ಅಶೋಕ್‌ ಲೇಲ್ಯಾಂಡ್‌ ತನ್ನ ಬಸ್‌ಗಳಿಗೆ ಬೇಕಾದ ಬ್ಯಾಟರಿ ವ್ಯವಸ್ಥೆಯನ್ನು ಈ ಕಂಪನಿಯಿಂದಲೇ ಪಡೆಯುತ್ತಿದೆ. ಆಟೊರಿಕ್ಷಾಗಳು ಸಂಪೂರ್ಣ ಬ್ಯಾಟರಿ ಚಾಲಿತವನ್ನಾಗಿ ಪರಿವರ್ತನೆಗೊಂಡ (ರೆಟ್ರೊ ಫಿಟ್‌) ಮಾದರಿಗಳೂ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.