ADVERTISEMENT

‘ರೈತರ ಹೆಸರಲ್ಲಿ ಕಾಂಗ್ರೆಸ್‌ ನಾಟಕ ಮಂಡಳಿಯ ಪ್ರತಿಭಟನೆ’

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2020, 19:43 IST
Last Updated 20 ಡಿಸೆಂಬರ್ 2020, 19:43 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಬೆಂಗಳೂರು: ‘ದೆಹಲಿ ಸೇರಿದಂತೆ ದೇಶದ ವಿವಿಧೆಡೆ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವವರು ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರು’ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದರು.

‘ಕೃಷಿ ಸುಧಾರಣಾ ಕಾಯ್ದೆ- ವಿಮರ್ಶೆ’ ಕುರಿತು ನಗರದ ಕರ್ನಾಟಕ ಸಣ್ಣ ಕೈಗಾರಿಕಾ ಸಂಘದಲ್ಲಿ (ಕಾಸಿಯಾ) ಭಾನುವಾರ ನಡೆದ ‘ಸಂಸದ್ ಧ್ವನಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

‘ಈ ಹಿಂದೆ ಅಸ್ತಿತ್ವದಲ್ಲಿ ಇದ್ದ ಅಗತ್ಯ ಸರಕುಗಳ ಕಾಯ್ದೆ ಬ್ರಿಟಿಷರು ರೂಪಿಸಿದ್ದು. ಅದು ವಸಾಹತುಶಾಹಿ ಹಿತಾಸಕ್ತಿಯನ್ನು ಒಳಗೊಂಡಿತ್ತು. ಇದಕ್ಕೆ ತಿದ್ದುಪಡಿ ತಂದು ರೈತರ ಹಿತ ಕಾಯುವ ಕಾಯ್ದೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದು ಸೇರಿದಂತೆ ಮೂರೂ ಮಸೂದೆಗಳು ದಶಕಗಳಿಂದ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ’ ಎಂದರು.

ADVERTISEMENT

‘ಉದ್ಯಮಿ ತನ್ನ ಉತ್ಪನ್ನವನ್ನು ಬೇಕಾದ ದರಕ್ಕೆ ಯಾವುದೇ ವ್ಯಕ್ತಿಗೆ ಮಾರಾಟ ಮಾಡಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾಾನೆ. ಆದರೆ, ರೈತನಿಗೆ ಈ ಹಕ್ಕು ಯಾಕಿಲ್ಲ? ಖಾಸಗಿ ಉದ್ಯಮಿಗಳು ರೈತರನ್ನು ಸುಲಿಗೆ ಮಾಡಬಹುದು ಅಥವಾ ವಂಚಿಸಬಹುದು ಎಂಬ ವಾದವನ್ನು ಕೆಲವರು ಮುಂದಿಡುತ್ತಾರೆ. ಹಾಗಿದ್ದರೆ, ಕೃಷಿಯ ಭಾಗವಾದ ಹೈನುಗಾರಿಕೆಯಲ್ಲಿ ಇದು ಯಾಕೆ ಆಗುತ್ತಿಲ್ಲ? ಅಲ್ಲಿ ಕೂಡ ಖಾಸಗಿ ಕಂಪನಿಗಳು ರೈತರಿಂದ ಹಾಲು ಖರೀದಿಸುತ್ತಿವೆ. ಹಾಲು ಉತ್ಪಾದನಾ ಸಂಘಗಳ ಮಾದರಿಯಲ್ಲೇ ರೈತ ಉತ್ಪಾದಕರ ಸಂಘಗಳನ್ನು ಮಾಡಿ, ರೈತರ ಹಿತ ಕಾಯುವುದು ಸರ್ಕಾರದ ಕನಸು. ಇದರಿಂದ ಯಾವ ಸಮಸ್ಯೆ ಆಗುತ್ತದೆ? ಕಾಯ್ದೆಗಳ ಕುರಿತು ತಾರ್ಕಿಕವಾಗಿ ಯಾಕೆ ಪ್ರತಿಭಟನಕಾರರು ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಬ್ಯಾಕ್ ಟು ವಿಲೇಜ್’ ಸಂಸ್ಥಾಪಕ ಮನೀಶ್ ಕುಮಾರ್, ‘ನೂತನ ಕಾಯ್ದೆಗಳ ಹಿಂದೆ ಕನಿಷ್ಠ ಬೆಂಬಲ ಬೆಲೆ ತೆಗೆದುಹಾಕುವ ಉದ್ದೇಶ ಇದೆ ಎಂದು ಆರೋಪಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು. ಅದೇನೇ ಇರಲಿ, ಯಾವುದೇ ಸರ್ಕಾರಗಳು ವ್ಯಾಪಾರಕ್ಕಿಳಿಯಬಾರದು. ಬದಲಿಗೆ ಅಗತ್ಯ ಸೇವೆಗಳನ್ನು ಕಲ್ಪಿಸುವ ಸೇತುವೆಗಳಾಗಿ ಕೆಲಸ ಮಾಡಬೇಕು’ ಎಂದರು.

‘1 ಕೆಜಿ ಅಕ್ಕಿಗೆ ನಾವು ನಾಲ್ಕೈದು ಸಾವಿರ ಲೀಟರ್‌ ನೀರು ಖರ್ಚು ಮಾಡಬೇಕಾಗುತ್ತದೆ. ಪರಿಸರದ ಮೇಲಿನ ಪರಿಣಾಮದ ದೃಷ್ಟಿಯಿಂದ ಇದು ಭವಿಷ್ಯದಲ್ಲಿ ದೊಡ್ಡ ಸಮಸ್ಯೆ ಆಗಿ ಪರಿಣಮಿಸಲಿದೆ. ಚೀನಾ ಮತ್ತಿತರ ದೇಶಗಳು ಭತ್ತದ ಉತ್ಪಾದನೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದು, ಆಮದು ಮಾಡಿಕೊಳ್ಳುತ್ತಿವೆ. ಆದರೆ, ನಾವು ಇದರ ಗಂಭೀರತೆಯನ್ನು ಅರಿಯುವಲ್ಲಿ ಹಿಂದುಳಿದಿದ್ದೇವೆ. ಇದರರ್ಥ ನಾವು ಭತ್ತವನ್ನೇ ಬೆಳೆಯಬಾರದು ಎಂದಲ್ಲ. ಸಾಧ್ಯವಾದಷ್ಟು ಕಡಿಮೆ ಮಾಡಬೇಕು’ ಎಂದರು.

***

ಚಳವಳಿ ನಡೆಸುತ್ತಿರುವವರಿಗೆ ಮಾತ್ರ ಈ ಕಾಯ್ದೆ ಮಾರಕವಾಗಿರಬಹುದು. ಉಳಿದ ಶೇ. 99ರಷ್ಟು ರೈತರಿಗೆ ಇದರಿಂದ ಅನುಕೂಲ ಆಗಲಿದೆ. ರಾಹುಲ್‌ ಗಾಂಧಿಗೆ ಕೃಷಿ ಬಗ್ಗೆ ಗೊತ್ತಿಲ್ಲ. ಉತ್ತುವು–ಬಿತ್ತುವುದು ಎಂದರೇನೆಂದೇ ಅವರಿಗೆ ತಿಳಿದಿಲ್ಲ.
-ವಿ. ಸೋಮಣ್ಣ, ವಸತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.