ADVERTISEMENT

ಸುರಂಗ ರಸ್ತೆ| ಹಣ ಲೂಟಿ ಮಾಡುವ ಯೋಜನೆ: ಸಂಸದ ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 16:18 IST
Last Updated 14 ಜುಲೈ 2025, 16:18 IST
   

ಬೆಂಗಳೂರು: ‘ರಾಜ್ಯ ಸರ್ಕಾರ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ‘ಸುರಂಗ ರಸ್ತೆ’ ಯೋಜನೆ ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಯೋಜನೆಯಾಗಿದೆ’ ಎಂದು ಆರೋಪಿಸಿದ ಸಂಸದ ತೇಜಸ್ವಿ ಸೂರ್ಯ, ‘ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಅನುಷ್ಠಾನ ಮಾಡಲು ಬಿಜೆಪಿ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಪ್ಪುಪಟ್ಟಿಗೆ ಸೇರಿದ ಕಂಪನಿಯಿಂದ ಸುರಂಗ ರಸ್ತೆ ಯೋಜನೆಯ ಡಿಪಿಆರ್‌ ಸಿದ್ಧಪಡಿಸಲಾಗಿದೆ. ಈ ಯೋಜನೆಯ ಡಿಪಿಆರ್‌ನಲ್ಲಿ ಬೆಂಗಳೂರು ಮೆಟ್ರೊ ಯೋಜನೆ ಎಂದಿದೆ. ಡಿಪಿಆರ್‌ಗಾಗಿ ₹9.5 ಕೋಟಿ ಖರ್ಚು ಮಾಡಿದೆ. ಮೆಟ್ರೊಗೆ ಸಂಬಂಧಿಸಿದ ಯೋಜನೆಯನ್ನೇ ಕಾ‍ಪಿ ಆ್ಯಂಡ್ ಪೇಸ್ಟ್‌ ಮಾಡಿ, ಸುರಂಗ ರಸ್ತೆ ಯೋಜನೆಯನ್ನು ತಯಾರಿಸಲಾಗಿದೆ. ಇದು ಕಾಂಗ್ರೆಸ್‌ನ ಜೇಬು ತುಂಬಿಸುವ ಯೋಜನೆ’ ಎಂದು ದೂರಿದರು. 

’18 ಕಿ.ಮೀ. ಉದ್ದದ ಸುರಂಗ ರಸ್ತೆ ಯೋಜನೆಗೆ ₹18,500 ಕೋಟಿ ವೆಚ್ಚ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಹೆಬ್ಬಾಳದಿಂದ ಡೇರಿ ವೃತ್ತದವರೆಗೆ ಕೇವಲ ಕಾರುಗಳಷ್ಟೇ ಸಂಚರಿಸಲು ಮಾಡುತ್ತಿರುವ ಈ ಯೋಜನೆಯ ಡಿಪಿಆರ್‌, ಸಾಧ್ಯಾಸಾಧ್ಯತೆ ವರದಿಯಲ್ಲಿ ಸಾಕಷ್ಟು ತಪ್ಪುಗಳು ಮತ್ತು ಅವ್ಯವಹಾರ ಕಂಡು ಬರುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಈ ಸುರಂಗ ರಸ್ತೆಯಲ್ಲಿ ಕಾರಿನಲ್ಲಿ ಗಂಟೆಗೆ 600ರಿಂದ 1600 ಜನರು ಓಡಾಡಬಹುದು. ಬೈಕ್, ದ್ವಿಚಕ್ರ ವಾಹನಕ್ಕೆ ಅವಕಾಶ ಆದರೆ 7500 ಜನ, ಅದೇ ಜಾಗದಲ್ಲಿ ಮೆಟ್ರೊ ಮಾಡಿದರೆ, ಗಂಟೆಗೆ 25 ಸಾವಿರ ಜನರು ಓಡಾಡಬಹುದು. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯಾವುದು ಬೇಕೆಂದು ಜನರೇ ತೀರ್ಮಾನಿಸಬೇಕು’ ಎಂದು ತಿಳಿಸಿದರು.

‘ಸುರಂಗ ರಸ್ತೆಗೆ ಟೋಲ್ ನಿಗದಿಪಡಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ. ಡಿಪಿಆರ್‌ನಲ್ಲೂ ಟೋಲ್‌ ಶುಲ್ಕ ₹660 ವಿಧಿಸಲು ಉದ್ದೇಶಿಸಲಾಗಿದೆ. ಈ ರಸ್ತೆ ಕೇವಲ ಶ್ರೀಮಂತರಿಗಾಗಿ ಮಾಡಲಾಗುತ್ತಿದೆ. ಇದರಿಂದ ಬಡವರಿಗೆ, ಮಧ್ಯಮವರ್ಗದವರಿಗೆ ಏನೂ ಪ್ರಯೋಜನವಿಲ್ಲ’ ಎಂದು ತೇಜಸ್ವಿ ಸೂರ್ಯ ಹೇಳಿದರು.

‘ಬೆಂಗಳೂರಿನಲ್ಲಿ 9 ಸಾವಿರ ಬಸ್‌ಗಳ ಕೊರತೆ ಇದೆ. ಬಸ್ ಸಂಖ್ಯೆ ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಉಪ ನಗರ ರೈಲ್ವೆ ಯೋಜನೆ, ನಾಲ್ಕು ಕಾರಿಡಾರ್‌ಗಳ ಯೋಜನೆಗಳು ನನೆಗುದಿಗೆ ಬಿದ್ದಿವೆ. 2031ರ ಒಳಗೆ ಮೆಟ್ರೊ ಜಾಲ 317 ಕಿ.ಮೀ. ಇರಬೇಕು. ಆದರೆ, ಈಗ ಕೇವಲ 78 ಕಿ.ಮೀ. ಇದೆ. ನಾಲ್ಕು ವರ್ಷಗಳಿಂದ ನಡೆಯುತ್ತಿರುವ ಹಳದಿ ಮಾರ್ಗ ಸಿದ್ಧವಾಗಿದ್ದರೂ ರೈಲು ಸಂಚಾರ ಆರಂಭವಾಗಿಲ್ಲ. ಎರಡೂವರೆ ಕಿ.ಮೀ. ಉದ್ದದ ಈಜಿಪುರ ಮೆಲ್ಸೇತುವೆ ಅರ್ಧಕ್ಕೆ ನಿಂತಿದೆ. ಆದರೆ, ಸುರಂಗ ರಸ್ತೆ ಯೋಜನೆಗೆ ಮುಂದಾಗಿದ್ದೀರಿ’ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಶಾಸಕ ಧೀರಜ್ ಮುನಿರಾಜು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.