ADVERTISEMENT

ಸೈಕಲ್‌ ಏರಿದ ತೇಜಸ್ವಿ ಸೂರ್ಯಗೆ ಸುರಕ್ಷತೆಯ ಪಾಠ!

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 21:21 IST
Last Updated 26 ಜುಲೈ 2021, 21:21 IST
ತೇಜಸ್ವಿ ಸೂರ್ಯ ಅವರು ಟ್ವೀಟ್‌ ಮಾಡಿರುವ ಚಿತ್ರ
ತೇಜಸ್ವಿ ಸೂರ್ಯ ಅವರು ಟ್ವೀಟ್‌ ಮಾಡಿರುವ ಚಿತ್ರ   

ಬೆಂಗಳೂರು: ನಗರದ ರಸ್ತೆಗಳಲ್ಲಿ ಸೈಕಲ್‌ ಸವಾರಿ ಮಾಡಿದ ಚಿತ್ರಗಳನ್ನು ಸಂಸದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸೂರ್ಯ ಅವರ ಈ ನಡೆಗೆ ಅನೇಕರು ಮೆಚ್ಚುಗೆ ವ್ಯಕ್ತ‍ಪಡಿಸಿದ್ದಾರೆ. ಆದರೆ ಅವರು ಸೈಕಲ್‌ ಸವಾರಿ ವೇಳೆ ಮಾಸ್ಕ್‌ ಹಾಗೂ ಇತರ ಸುರಕ್ಷತಾ ಸಾಮಗ್ರಿಗಳನ್ನು ಧರಿಸದ ಬಗ್ಗೆ ಅನೇಕರು ಟೀಕೆಯನ್ನೂ ವ್ಯಕ್ತಪಡಿಸಿದ್ದಾರೆ.

ತೇಜಸ್ವಿ ಸೂರ್ಯ ಅವರು ತಮ್ಮ ಸೈಕಲ್‌ ಸವಾರಿಯ ಚಿತ್ರಗಳ ಜೊತೆ, ‘ಬಿಜೆವೈಎಂನ (ಭಾರತೀಯ ಜನತಾ ಯುವ ಮೋರ್ಚಾ) ಚೀಯರ್ಸ್‌ ಫಾರ್‌ ಇಂಡಿಯಾ – ಒಲಿಂಪಿಯನ್‌ನಂತಾಗಿ ಸವಾಲಿನ ಮೂರನೇ ದಿನದ ಚಟುವಟಿಕೆ ಇದು. 12 ಸೂರ್ಯ ನಮಸ್ಕಾರ (ವಾರ್ಮ್‌ಅಪ್‌), 25.96 ಕಿ.ಮೀ ಸೈಕ್ಲಿಂಗ್‌, ಸುಮಾರು 600 ಕಿಲೋ ಕ್ಯಾಲರಿ ಕರಗಿಸುವಿಕೆ, ಮಹಾಭಾರತದ ಓದನ್ನು ಮುಂದುವರಿಸುವಿಕೆ.. ನೀವೇನು ಮಾಡಿದ್ದೀರಿ? cheer4india.bjym.org ನಲ್ಲಿ ಹೆಸರು ನೋಂದಾಯಿಸಿ, ನಿಮ್ಮ ಪ್ರಗತಿಯನ್ನು ದಾಖಲಿಸಿ’ ಎಂದು ಭಾನುವಾರ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ 1,182 ಬಾರಿ ಮರುಟ್ವೀಟ್‌ ಆಗಿದೆ. 9327 ಮಂದಿ ಇದನ್ನು ಲೈಕ್‌ ಮಾಡಿದ್ದಾರೆ.

ಇದಕ್ಕೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಡಾ.ಗುರು ಎಂ.ಡಿ, ‘ಸೈಕಲ್‌ ಸವಾರಿ ವೇಳೆ ಹೆಲ್ಮೆಟ್‌ ಧರಿಸದಿರುವುದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆಮದು ಮಾಡಿಕೊಂಡ ಟ್ರೆಕ್‌ ಬೈಕ್‌ನಲ್ಲಿ ಸವಾರಿ ಮಾಡಿದ್ದೀರಿ. ಮೇಕ್‌ ಇನ್ ಇಂಡಿಯಾದಿಂದ ಭಾರತದಲ್ಲಿ ಉತ್ತಮ ಸೈಕಲ್‌ಗಳು ಕೂಡಾ ತಯಾರಾಗುತ್ತಿಲ್ಲ ಎಂದು ನೀವು ಇದರಿಂದ ಒಪ್ಪಿಕೊಂಡಂತಾಗುತ್ತದೆ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

ಶರಣ ಎಂಬುವರು, ‘ಮಾಸ್ಕ್‌ ಎಲ್ಲಿಯಪ್ಪಾ, ಪ್ರತಿನಿಧಿಯಾಗಿ ಈ ರೀತಿ ಇದ್ದರೆ ಹೇಗೆ... ಒಳ್ಳೆಯ ಕೆಲಸ ಮಾಡುವಾಗ ದಯವಿಟ್ಟು ಮಾಸ್ಕ್‌ ಹಾಕ್ಕೊಳ್ಳಿ’ ಎಂದು ಟ್ವೀಟ್ ಮಾಡಿದ್ದಾರೆ.

ಅರುಣ್‌ ಸುರೇಶ್‌ ಕುಮಾರ್‌ ಅವರು, ‘ಸುರಕ್ಷತಾ ಪರಿಕರಗಳನ್ನು ಧರಿಸಿ. ಸದಾ ರಸ್ತೆಯ ಎಡ ಪಥದಲ್ಲೇ ಚಲಿಸಿ. ಇತರರು ಕೂಡಾ ಸುರಕ್ಷಿತವಾಗಿ ಸೈಕಲ್‌ ಸವಾರಿ ಮಾಡಲು ಪ್ರೇರೇಪಿಸುವಂತೆ ನಿಮ್ಮ ಸ್ಟೇಟಸ್‌ ಚಿತ್ರಗಳಿರಲಿ. ನೀವು ಹಂಚಿಕೊಳ್ಳುವ ಚಿತ್ರಗಳಲ್ಲಿರುವ ಇತರ ಖಾಸಗಿ ವಾಹನಗಳ ಸಂಖ್ಯೆಯನ್ನು ಮರೆಮಾಚಿ’ ಎಂದು ಸಲಹೆ ನೀಡಿದ್ದಾರೆ.

ಪ್ರಿಯದೀಪ್ತ ಮಿಶ್ರಾ ಅವರು, ‘ನಿಮ್ಮ ನಡೆಯು ಭಾರತದ ಹಳೆಯ ರಾಜಕಾರಣಿಗಳ ಯುಗದ ಕುರಿತ ಚಿತ್ರಣವನ್ನು ಬದಲಿಸುವಂತಿದೆ. ಇಂತಹ ಚಟುವಟಿಕೆಗಳು ಖಂಡಿತಾ ಬುದ್ಧಿವಂತ ಯುವಜನರು ರಾಜಕೀಯ ಸೇರುವುದಕ್ಕೆ ಹೆಚ್ಚೆಚ್ಚು ಪ್ರೇರಣೆ ನೀಡಲಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಮೇಶ್‌ ಶಿವರಾಜು ಅವರು, ‘ಜನರು ನೀಡೊ ಸಂಬಳ ಸವಲತ್ತು ಪಡೆದು ಉಂಡು ತಿಂದು ಈ ರೀತಿ ಬರೇ ನಿಮ್ಮ ದೇಹ, ನಿಮ್ಮ ಓದಿನ ಬಗ್ಗೆ ಟೈಮ್‌ಪಾಸ್‌ ಮಾಡ್ತಾ ಇದ್ದೀರಾ ನೀವು. ದುರದೃಷ್ಟಕರ! ಎಲ್ಲೆಲ್ಲೂ ನೆರೆ ಹಾವಳಿ ಇದೆ. ಎರಡು ಬಾರಿಯೂ ಅನ್ಯಾಯ ಮಾಡಿತು ಮೋದಿ ಸರ್ಕಾರ. ಈ ಬಾರಿಯಾದರೂ ನೊಂದಿರುವ ಸಂತ್ರಸ್ತರನ್ನು ನೀವು ಗಮನಿಸಿ. ಜನರ ಕಷ್ಟ ನೋಡಿ. ಹೋಗಿ, ಪರಿಹಾರ ತಂದು ಒದಗಿಸಿ’ ಎಂದು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.