ADVERTISEMENT

ಪೊಲೀಸ್‌ ಸಹಾಯವಾಣಿಗೆ ಬರುವ ಕರೆಗಳು ‘ಟೆಲಿ ಮನಸ್‌’ಗೆ ವರ್ಗ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 16:06 IST
Last Updated 4 ಫೆಬ್ರುವರಿ 2026, 16:06 IST
ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಅವರು ‘ಟೆಲಿ ಮನಸ್‌’ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆ ಮಾಡಿದರು  
ನಗರ ಪೊಲೀಸ್ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್ ಅವರು ‘ಟೆಲಿ ಮನಸ್‌’ ಕಾರ್ಯಕ್ರಮದ ಪೋಸ್ಟರ್‌ ಬಿಡುಗಡೆ ಮಾಡಿದರು     

ಬೆಂಗಳೂರು: ನಗರ ಪೊಲೀಸ್ ಹಾಗೂ ನಿಮ್ಹಾನ್ಸ್‌ ಸಹಯೋಗದಲ್ಲಿ ‘ಟೆಲಿ ಮನಸ್ –14416’ ಆರಂಭಿಸಲಾಗಿದ್ದು, ಪೊಲೀಸ್ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್ ಹಾಗೂ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಅವರು ಟೆಲಿ ಮನಸ್‌ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು. 

ಪೊಲೀಸ್‌ ಸಹಾಯವಾಣಿಗೆ ಮಾನಸಿಕ ತೊಂದರೆ, ಒತ್ತಡದ ಪರಿಸ್ಥಿಯಲ್ಲಿರುವ ಕರೆಗಳು ಹೆಚ್ಚು ಬರುತ್ತಿದ್ದು, ‘ಟೆಲಿ ಮನಸ್’ ಮೂಲಕ ಪರಿಹಾರ ರೂಪಿಸುವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.

ಪ್ರತಿಮಾ ಮೂರ್ತಿ ಮಾತನಾಡಿ, ‘ರಾಷ್ಟ್ರೀಯ ಟೆಲಿ ಮನಸ್ ಆರೋಗ್ಯ ಕಾರ್ಯಕ್ರಮವು ದೇಶದಾದ್ಯಂತ ಆರೋಗ್ಯ ಸೇವೆ ಒದಗಿಸುತ್ತಿದೆ. ಪೊಲೀಸ್ ಸಹಾಯವಾಣಿ 112ಕ್ಕೆ ಬರುವ ಕರೆಗಳಲ್ಲಿ ಬಹುತೇಕ ಕರೆಗಳು ಮಾನಸಿಕ ಒತ್ತಡ, ಖಿನ್ನತೆ, ಸಂಕಷ್ಟದ ಪರಿಸ್ಥಿತಿಗೆ ಸಂಬಂಧಿಸಿದ್ದಾಗಿವೆ. ಪೊಲೀಸ್ ಕಮಿಷನರ್ ಅದನ್ನು ಗಮನಿಸಿ, ನಿಮ್ಹಾನ್ಸ್ ಸಹಾಯವಾಣಿಗೆ ವರ್ಗಾವಣೆ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ’ ಎಂದರು.

ADVERTISEMENT

ಸೀಮಾಂತ್‌ ಕುಮಾರ್ ಸಿಂಗ್ ಮಾತನಾಡಿ, ‘ರಾತ್ರಿ 9 ಗಂಟೆ ನಂತರ 112ಕ್ಕೆ ಬರುವ ಕರೆಗಳಲ್ಲಿ ಬಹುತೇಕವು ನಿದ್ರೆ ಬರುತ್ತಿಲ್ಲ, ಮಾನಸಿಕ ತೊಂದರೆಯಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿಮ್ಹಾನ್ಸ್ ನಿರ್ದೇಶಕರನ್ನು ಸಂಪರ್ಕಿಸಿ, ಯೋಜನೆ ರೂಪಿಸಲಾಗಿದೆ. ಮಾನಸಿಕ ಸಮಸ್ಯೆಯ ಕುರಿತು ಪೊಲೀಸ್ ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರುತ್ತಿವೆ. ಅಂತಹ ಕರೆಗಳನ್ನು ನಿಮ್ಹಾನ್ಸ್‌ನಲ್ಲಿರುವ ಟೆಲಿ ಮನಸ್ ಸಹಾಯವಾಣಿಗೆ ನಮ್ಮ ಸಿಬ್ಬಂದಿ ವರ್ಗಾವಣೆ ಮಾಡಲಿದ್ದಾರೆ. ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ನಿಮ್ಹಾನ್ಸ್ ವೈದ್ಯರು ಸಲಹೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ನಿಮ್ಹಾನ್ಸ್ ವೈದ್ಯ ಡಾ.ನವೀನ್, ಜಂಟಿ ಪೊಲೀಸ್ ಕಮಿಷನರ್‌ ಕುಲದೀಪ್ ಕುಮಾರ್ ಜೈನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.