ADVERTISEMENT

ದೇವಾಲಯ ನೆಲಸಮಕ್ಕೆ ಆಕ್ಷೇಪ: ₹25 ಸಾವಿರ ದಂಡ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ಪಾವತಿಸಲು ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 20:07 IST
Last Updated 20 ಜುಲೈ 2020, 20:07 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು:ಜಯನಗರ 4ನೇ ಬ್ಲಾಕ್‌ನಲ್ಲಿ ಫುಟ್‌ಪಾತ್‌ ಮೇಲಿರುವ ದೇವಾಲಯ ನೆಲಸಮ ಮಾಡುತ್ತಿರುವುದನ್ನು ಆಕ್ಷೇಪಿಸಿ ಅರ್ಜಿ ಸಲ್ಲಿಸಿದ್ದ ಭಕ್ತರ ತಂಡವು ’ಮುಖ್ಯಮಂತ್ರಿಗಳ ಕೋವಿಡ್ –19 ನಿಧಿಗೆ‘ ₹25 ಸಾವಿರ ಪಾವತಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿದೆ.

‘ಅನಧಿಕೃತವಾಗಿ ಫುಟ್‌ಪಾತ್ ಮೇಲೆ ದೇವಾಲಯ ನಿರ್ಮಿಸುವುದು ಯಾವುದೇ ಧರ್ಮದ ಅವಶ್ಯಕ ಭಾಗವಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.

ದೇವಸ್ಥಾನ ನೆಲಸಮ ಮಾಡದಂತೆ ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಸನಾತನ ಕಲಾಕ್ಷೇತ್ರ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳುಮಾರ್ಚ್‌ 4 ರಂದು ಇದೇ ರೀತಿಯ ಅರ್ಜಿ ಸಲ್ಲಿಸಿದ್ದವು. ವಕೀಲ ಅಶೋಕ್ ಹಾರನಹಳ್ಳಿ ಕೂಡ ಅರ್ಜಿದಾರರ ಪರ ವಾದ ಮಾಡಿ ‘ರಸ್ತೆ ವಿಸ್ತರಣೆ ಮಾಡಿದ್ದರಿಂದ ದೇವಾಲಯ ಈಗ ಫುಟ್‌ಪಾತ್‌ನಲ್ಲಿದೆ’ ಎಂದಿದ್ದರು.

ADVERTISEMENT

‘ಅನಧಿಕೃತ ಕಟ್ಟಡಗಳು ಇರದಂತೆ ನೋಡಿಕೊಳ್ಳುವುದು ಸ್ಥಳೀಯ ನಾಗರಿಕರ ಜವಾಬ್ದಾರಿ. ಆದರೆ, ಇಲ್ಲಿ ಅನಧಿಕೃತ ಕಟ್ಟಡ ಕಾಪಾಡಲು ನಾಗರಿಕರೇ ಅರ್ಜಿಗಳನ್ನು ಸಲ್ಲಿಸುತ್ತಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ’ ಎಂದು ಪೀಠ ಹೇಳಿತು.

ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ ಪೀಠ, ‘ಮುಖ್ಯಮಂತ್ರಿ ಪರಿಹಾರ ನಿಧಿಗೆ ಆರು ವಾರಗಳಲ್ಲಿ ಮೊತ್ತ ಪಾವತಿಸಬೇಕು’ ಎಂದು ತಿಳಿಸಿತು.

‘ಜೂನ್ 21 ಮತ್ತು ಜುಲೈ 6ರಂದು ದೇವಾಲಯ ನೆಲಸಮಕ್ಕೆ ದಿನ ನಿಗದಿ ಮಾಡಲಾಗಿತ್ತು. ಪೊಲೀಸರು ಭದ್ರತೆ ನೀಡಲಿಲ್ಲ’ ಎಂದು ಬಿಬಿಎಂಪಿ ವಿವರಿಸಿತು. ಪೀಠ ಜುಲೈ 30ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.