ADVERTISEMENT

ದೇವಾಲಯ ಅಭಿವೃದ್ಧಿ, ಶೈಕ್ಷಣಿಕ ತರಬೇತಿ: ಭಾನುಪ್ರಕಾಶ್ ಶರ್ಮ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:57 IST
Last Updated 11 ಏಪ್ರಿಲ್ 2025, 15:57 IST
ಭಾನುಪ್ರಕಾಶ್ ಶರ್ಮ
ಭಾನುಪ್ರಕಾಶ್ ಶರ್ಮ   

ಬೆಂಗಳೂರು: ‘ಹಿಂದುಳಿದ ಪ್ರದೇಶದಲ್ಲಿರುವ ಬ್ರಾಹ್ಮಣ ಸಮುದಾಯದ ದೇವಾಲಯಗಳ ಅಭಿವೃದ್ಧಿ, ಉನ್ನತ ವ್ಯಾಸಂಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸೇರಿ ಸಮುದಾಯದ ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡಲಾಗುವುದು’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಭಾನುಪ್ರಕಾಶ್ ಶರ್ಮ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸನಾತನ ಧರ್ಮದ ರಕ್ಷಣೆಗೆ ಧರ್ಮ ಜಾಗೃತಿ ಶಿಬಿರಗಳನ್ನು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುವುದು. ಭಜನಾ ಮಂಡಳಿ, ಸಹಸ್ರನಾಮ ಮಂಡಳಿ ಸೇರಿ ವಿವಿಧ ಸಂಘಗಳನ್ನು ಸ್ಥಾಪಿಸಿ, ಪ್ರೋತ್ಸಾಹಿಸಲಾಗುವುದು. ದೇವಾಲಯಗಳನ್ನು ಸರ್ಕಾರದ ನಿರ್ವಹಣೆಯಿಂದ ಬಿಡುಗಡೆ ಮಾಡಿ, ಸ್ಥಳೀಯ ನಿರ್ವಹಣಾ ಮಂಡಳಿಗೆ ವಹಿಸಲು ಶ್ರಮಿಸಲಾಗುವುದು. ಸಾಮೂಹಿಕ ಆಚರಣೆಗಳನ್ನು ನಡೆಸಲಾಗುವುದು. ಕೃಷಿಕರು, ಅಡುಗೆ ತಯಾರಕರು, ಅರ್ಚಕರು ಸೇರಿ ಪಾರಂಪರಿಕ ವೃತ್ತಿಗಳಲ್ಲಿ ತೊಡಗಿಕೊಂಡವರಿಗೆ ಸಾಂದರ್ಭಿಕ ಅಗತ್ಯ ನೆರವು ಒದಗಿಸಲಾಗುವುದು’ ಎಂದು ಹೇಳಿದರು.

‘ಸಮುದಾಯದ ಒಡೆತನದ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ, ವಧು–ವರ ಅನ್ವೇಷಣೆ ಸಮಾವೇಶ, ಕುಟೀರ ನಿರ್ಮಾಣ ಸೇರಿ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ 11 ಜಿಲ್ಲೆಗಳಲ್ಲಿ ನಮ್ಮ ತಂಡದ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದರು. 

ADVERTISEMENT

ಮಹಾಸಭಾದ ಹಾಲಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ‘ಮಹಾಸಭಾದ 50 ವರ್ಷಗಳ ಇತಿಹಾಸದಲ್ಲಿ ವೈದಿಕ ಪರಂಪರೆಯಲ್ಲಿ ತೊಡಗಿಕೊಂಡವರು ಮೊದಲಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ರಾಜಕೀಯ ಶಕ್ತಿಯಿಲ್ಲ. ನಮಗೆ ನಾವೇ ಸಹಾಯ ಮಾಡಿಕೊಳ್ಳಬೇಕಿದೆ. ಹೊಸಬರಿಗೆ ಅವಕಾಶ ನೀಡಬೇಕೆಂಬ ಕಾರಣಕ್ಕೆ ಈ ಬಾರಿ ಸ್ಪರ್ಧಿಸಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.