
ಬೆಂಗಳೂರು: ದೇವರಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನುಗ್ಗಿ ಚಪ್ಪಲಿ ಧರಿಸಿದ್ದ ಕಾಲಿನಿಂದ ದೇವರ ವಿಗ್ರಹಕ್ಕೆ ಒದ್ದಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಥಳಿಸಿದ್ದಾರೆ.
ಬಾಂಗ್ಲಾದೇಶದ ಕಬೀರ್ ಎಂಬಾತನನ್ನು ಮಾರತ್‌ಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಬೀರ್ ವಿರುದ್ಧ ಮಾರತ್‍ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರೇ ಹಿಡಿದು ಆರೋಪಿಯನ್ನು ಅರೆನಗ್ನಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಆರೋಪಿ ಅಂಗವಿಕಲನಾಗಿದ್ದು ಹಲ್ಲೆಯಿಂದ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.
ದೇವರಬೀಸನಹಳ್ಳಿಯಲ್ಲಿ ವಾಸವಾಗಿದ್ದ ಕಬೀರ್, ಚಪ್ಪಲಿ ಮಾರಾಟದ ಅಂಗಡಿ ಇಟ್ಟುಕೊಂಡಿದ್ದ. ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದೆ. ಯಾವುದೇ ದಾಖಲೆಗಳು ಇಲ್ಲ. ಬಾಂಗ್ಲಾದೇಶದಿಂದ ವಲಸೆ ಬಂದು ನಗರದಲ್ಲಿ ಅಕ್ರಮವಾಗಿ ನೆಲಸಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಮಂಗಳವಾರ ಬೆಳಿಗ್ಗೆ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಹೋಗಿದ್ದ ಆರೋಪಿ, ಸಮೀಪದ ಔಷಧ ಮಾರಾಟ ಮಳಿಗೆಯ ಎದುರು ಹಾಕಿದ್ದ ಗಣಪತಿ ದೇವರ ಫೋಟೊಗಳಿಗೆ ಊರುಗೋಲಿನಿಂದ ಹೊಡೆದಿದ್ದ. ಅದನ್ನು ಗಮನಿಸಿದ್ದ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ನಂತರ, ಆತ ಏಕಾಏಕಿ ದೇವಸ್ಥಾನದತ್ತ ಓಡಿ ಹೋಗಿ ಗರುಡ ಕಂಬಕ್ಕೆ ಕಲ್ಲಿನಿಂದ ಹೊಡೆದಿದ್ದ. ಬಳಿಕ ಚಪ್ಪಲಿ ಧರಿಸಿ ಗರ್ಭಗುಡಿಗೆ ನುಗ್ಗಿ ರಂಪಾಟ ಮಾಡಿದ್ದ. ಬಳಿಕ ದೇವರ ವಿಗ್ರಹಕ್ಕೆ ಕಾಲಿನಿಂದ ಒದ್ದಿದ್ದ. ಆರೋಪಿ ರಂಪಾಟವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯರು ದೇವಸ್ಥಾನದೊಳಗೆ ಹೋಗಿ ಕಬೀರ್‌ನನ್ನು ಹೊರಗೆ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಬಳಿಯಿದ್ದ ಆಯಿಲ್ ಬಾಟಲಿ, ಚಪ್ಪಲಿ, ಕಲ್ಲು ಜಪ್ತಿ ಮಾಡಲಾಗಿದೆ. ಆಸ್ಪತ್ರೆಯಲ್ಲಿರುವ ಕಬೀರ್, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ. ಆತ ಚೇತರಿಸಿಕೊಂಡ ನಂತರ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.