ADVERTISEMENT

‘ಸುತ್ತಾಟ’ಕ್ಕಾಗಿ ಹತ್ತು ಸ್ಕೂಟರ್ ಕದ್ದರು!

ಪೆಟ್ರೋಲ್ ಖಾಲಿಯಾದರೆ ಅಲ್ಲೇ ವಾಹನ ಬಿಟ್ಟು ಪರಾರಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 19:57 IST
Last Updated 17 ಡಿಸೆಂಬರ್ 2018, 19:57 IST
ಸುರೇಶ್
ಸುರೇಶ್   

ಬೆಂಗಳೂರು: ಪ್ರತಿದಿನ ಹೊಸ ಹೊಸ ಸ್ಕೂಟರ್‌ಗಳಲ್ಲಿ ತಿರುಗಾಡಬೇಕೆಂಬ ಖಯಾಲಿವುಳ್ಳ 45 ವರ್ಷದ ಈ ವ್ಯಕ್ತಿ, ಅದಕ್ಕಾಗಿ ವಾಹನ ಕಳ್ಳತನ ಶುರು ಮಾಡಿದರು. ಕದ್ದ ಸ್ಕೂಟರ್‌ನಲ್ಲಿ ನಗರ ಸುತ್ತುತ್ತಿದ್ದ ಇವರು, ಎಲ್ಲಿ ಪೆಟ್ರೋಲ್ ಖಾಲಿ ಆಗುತ್ತದೋ ಅಲ್ಲಿ ಗಾಡಿ ಬಿಟ್ಟು ಹೋಗುತ್ತಿದ್ದರು. ಅವರ ಕಳ್ಳಾಟದ ಓಟಕ್ಕೀಗ ಮಲ್ಲೇಶ್ವರ ಪೊಲೀಸರು ಬ್ರೇಕ್ ಹಾಕಿದ್ದಾರೆ.

‘ಮೈಸೂರಿನ ಬನ್ನೂರು ತಾಲ್ಲೂಕಿನ ಸುರೇಶ್ ಅಲಿಯಾಸ್ ಸೂರಿ ಎಂಬುವರನ್ನು ಬಂಧಿಸಿದ್ದೇವೆ. ಅವರು ಕದ್ದು ರಸ್ತೆ ಬದಿ ಬಿಟ್ಟು ಹೋಗಿದ್ದ 10 ಸ್ಕೂಟರ್‌ಗಳನ್ನು ಜಪ್ತಿ ಮಾಡಿದ್ದೇವೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಮಲ್ಲೇಶ್ವರ ಪೊಲೀಸರು ಹೇಳಿದರು.

ಕುಟುಂಬ ಸದಸ್ಯರನ್ನು ತೊರೆದು ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದ ಸುರೇಶ್, ಮೊದಲು ವಿಜಯನಗರದ ಸ್ನೇಹಿತನ ಮನೆಯಲ್ಲಿ ನೆಲೆಸಿದ್ದರು. ಗೆಳೆಯ ಊರು ಬಿಟ್ಟ ಬಳಿಕ, ಬಾಡಿಗೆ ಕಟ್ಟಲಾಗದೆ ತಾವೂ ಮನೆಯಿಂದ ಆಚೆ ಬಂದರು. ಸದ್ಯ ರೈಲು, ಬಸ್ ನಿಲ್ದಾಣಗಳಲ್ಲೇ ಮಲಗುತ್ತಿದ್ದರು.

ADVERTISEMENT

ಕೀ ನೋಡುತ್ತಿದ್ದರು: ಈ ನಡುವೆ ಸ್ಕೂಟರ್‌ಗಳ ಮೇಲೆ ಒಲವು ಬೆಳೆಸಿಕೊಂಡ ಅವರು, ‘ಕದ್ದಾದರೂ ಸರಿ. ನಿತ್ಯವೂ ಹೊಸ ಸ್ಕೂಟರ್‌ನಲ್ಲಿ ತಿರುಗಬೇಕು’ ಎಂಬ ನಿರ್ಧಾರಕ್ಕೆ ಬಂದಿದ್ದರು. ರೈಲು ಹಾಗೂ ಬಸ್ ನಿಲ್ದಾಣಗಳು, ದೇವಸ್ಥಾನಗಳು, ಮಾರ್ಕೆಟ್‌ಗಳಲ್ಲಿ ಸುತ್ತುತ್ತಿದ್ದ ಸುರೇಶ್, ಯಾರಾದರೂ ಸ್ಕೂಟರ್‌ನಲ್ಲೇ ಕೀ ಬಿಟ್ಟು ಹೋಗಿದ್ದರೆ ತಕ್ಷಣ ಆ ವಾಹನವನ್ನೇರಿ ಹೋಗುತ್ತಿದ್ದರು. ಪೆಟ್ರೋಲ್ ಖಾಲಿಯಾದ ಬಳಿಕ ಕೀ ಸಮೇತ ಅಲ್ಲೇ ಸ್ಕೂಟರ್ ಬಿಟ್ಟು ತೆರಳುತ್ತಿದ್ದರು ಎಂದು ಪೊಲೀಸರು ಹೇಳಿದರು.

ಡಿ.7ರ ಬೆಳಿಗ್ಗೆ 10.30ರ ಸುಮಾರಿಗೆ ಸಂಪಿಗೆ ರಸ್ತೆ 2ನೇ ಅಡ್ಡರಸ್ತೆಯಲ್ಲಿ ಮಹೇಶ್ ಎಂಬುವರು ಸ್ಕೂಟರ್ ನಿಲ್ಲಿ
ಸಿದ್ದರು. ಅವರು ಅಂಗಡಿ ಹೋಗಿ ಬರುವಷ್ಟರಲ್ಲಿ ಆ ಸ್ಕೂಟರ್ ಇರಲಿಲ್ಲ. ಸಿ.ಸಿ ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋ
ಪಿಯ ಚಹರೆ ಸಿಕ್ಕಿತು. ಸ್ವಲ್ಪ ಸಮಯದಲ್ಲೇ ಮಲ್ಲೇಶ್ವರದ ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿ ಬಳಿ ಆ ಸ್ಕೂಟರ್‌ ಸಿಕ್ಕಿತು. ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಸುರೇಶ್ ಸಹ ಸಿಕ್ಕಿಬಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.