ಬೆಂಗಳೂರು: ಸುರಂಗ ರಸ್ತೆ ನಿರ್ಮಾಣಕ್ಕೆ ಟೆಂಡರ್ ದಾಖಲೆಗಳನ್ನು ಅಂತಿಮಗೊಳಿಸುತ್ತಿದ್ದು, ಎರಡು ವಾರಗಳಲ್ಲಿ ಕಾಮಗಾರಿಗೆ ಟೆಂಡರ್ ಆಹ್ವಾನಿಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ತಿಳಿಸಿದರು.
‘ಅಭಿವೃದ್ಧಿ, ಕಾರ್ಯಾಚರಣೆ, ವರ್ಗಾವಣೆ (ಬಿಒಟಿ) ಆಧಾರದಲ್ಲಿ ಕೆಲವು ಪ್ರಕ್ರಿಯೆಗಳನ್ನು ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ. ಇದೆಲ್ಲವನ್ನೂ ಮುಗಿಸಿ ಗರಿಷ್ಠ 15 ದಿನದೊಳಗೆ ಟೆಂಡರ್ ಕರೆಯುತ್ತೇವೆ’ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಮರಗಳ ಗಣತಿ ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ ಸುಮಾರು ಆರು ಲಕ್ಷ ಮರಗಳ ಗಣತಿಯಾಗಿದೆ. ಇನ್ನು ಆರು ತಿಂಗಳಲ್ಲಿ ಗಣತಿ ಪ್ರಕ್ರಿಯೆ ಮುಗಿಯಲಿದೆ’ ಎಂದರು.
‘ಕೆಂಪೇಗೌಡ ದಿನಾಚರಣೆ ಜೂನ್ 27ರಂದು ನಡೆಯಲಿದೆ. ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಭಾಗವಹಿಸಲು ಅನುಕೂಲವಾಗುವಂತೆ ಆಯೋಜಿಸಲಾಗುತ್ತದೆ’ ಎಂದು ತಿಳಿಸಿದರು.
‘ಕೆ.ಆರ್. ಮಾರುಕಟ್ಟೆಯಲ್ಲಿ ಹಲವು ಕಡೆ ಕೆಟ್ಟ ಪರಿಸ್ಥಿತಿ ಇದೆ. ನೆಲ ಅಂತಸ್ತಿನಲ್ಲಿ ಒಳಚರಂಡಿ ನೀರು ತುಂಬಿರುತ್ತದೆ. ಈ ಮಾರುಕಟ್ಟೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.