ADVERTISEMENT

ಉಗ್ರ ಟಿ.ನಾಸೀರ್‌ಗೆ ನೆರವು ನೀಡಿದ ಆರೋಪ: ಎಎಸ್‌ಐ ಚಾಂದ್ ವಿರುದ್ಧ ಇಲಾಖಾ ತನಿಖೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 15:36 IST
Last Updated 11 ಜುಲೈ 2025, 15:36 IST
  ಚಾಂದ್‌ ಪಾಷಾ
  ಚಾಂದ್‌ ಪಾಷಾ   

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ಟಿ.ನಾಸೀರ್‌ಗೆ ನೆರವು ನೀಡಿದ ಆರೋಪದಡಿ ಎನ್ಐಎದಿಂದ ಬಂಧಿತರಾಗಿರುವ ನಗರ ಸಶಸ್ತ್ರ ಪಡೆಯ ಎಎಸ್ಐ ಚಾಂದ್‌ ಪಾಷಾ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಾಮಾನ್ಯವಾಗಿ ಈ ರೀತಿಯ ಆರೋಪ ಬಂದಾಗ ಅಧಿಕಾರಿಯನ್ನು ಅಮಾನತು ಮಾಡಲಾಗುತ್ತದೆ. ಆಂತರಿಕ ತನಿಖೆಯ ವರದಿ ಅನ್ವಯ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಎನ್ಐಎ ತನಿಖೆ ನಡೆಸುತ್ತಿದೆ’ ಎಂದರು.

ರಾಜ್ಯ ಸೇರಿದಂತೆ ದೇಶದ ಹಲವೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದಲ್ಲಿ ಶೋಧ ನಡೆಸಿದ್ದ ಎನ್‌ಐಎ ಅಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಸಶಸ್ತ್ರ ಮೀಸಲು ಪಡೆಯ ಎಎಸ್ಐ ಚಾಂದ್ ಪಾಷಾ, ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತೀಮಾಳನ್ನು ಬಂಧಿಸಿ, ವಿಚಾರಣೆ ತೀವ್ರಗೊಳಿಸಿದ್ದಾರೆ. 

ADVERTISEMENT

2008ರಲ್ಲಿ ಬೆಂಗಳೂರಿನಲ್ಲಿ ಸರಣಿ ಸ್ಫೋಟ ಪ್ರಕರಣಗಳು ನಡೆದಿದ್ದವು. ಘಟನೆಯಲ್ಲಿ ಇಬ್ಬರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದರು. ಆ ಪ್ರಕರಣದಲ್ಲಿ ಟಿ.ನಾಸೀರ್‌ನನ್ನು ಎನ್‌ಐಎ ಬಂಧಿಸಿತ್ತು. ಜೈಲಿನಲ್ಲಿದ್ದ ಶಂಕಿತ ಉಗ್ರರ ತಂಡವು ಕಾರಾಗೃಹದ ಅಧಿಕಾರಿಗಳ ಜತೆಗೆ ಸೇರಿಕೊಂಡು ಟಿ.ನಾಸೀರ್ ಜೈಲಿನಿಂದ ಪರಾರಿಯಾಗುವಂತೆ ಮಾಡಲು ಸಂಚು ರೂಪಿಸಿತ್ತು. ಚಾಂದ್ ಪಾಷಾಗೆ ನಾಸೀರ್‌ನನ್ನು ಕೋರ್ಟ್‌ಗೆ ಕರೆದೊಯ್ಯುವ ಜವಾಬ್ದಾರಿ ವಹಿಸಲಾಗಿತ್ತು ಎಂಬುದು ತನಿಖೆ ವೇಳೆ ಪತ್ತೆಯಾಗಿತ್ತು.

ಚಾಂದ್ ಪಾಷಾಗೆ ಎಲ್‌ಇಟಿ ಉಗ್ರ ಟಿ.ನಾಸೀರ್‌ ಸಹಚರರಿಂದ ಲಕ್ಷಾಂತರ ರೂಪಾಯಿ ಸಂದಾಯ ಆಗಿರುವುದು ಬ್ಯಾಂಕ್‌ ಖಾತೆಗಳ ಪರಿಶೀಲನೆ ವೇಳೆ ಪತ್ತೆಯಾಗಿದೆ. ಹಣವನ್ನು ತನ್ನ ಬ್ಯಾಂಕ್ ಖಾತೆ ಬದಲು ವ್ಯಾಸಂಗ ಮಾಡುತ್ತಿರುವ ಪುತ್ರ ಹಾಗೂ ಸಂಬಂಧಿಯೊಬ್ಬರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.