ADVERTISEMENT

ಟಿ.ಇ.ಟಿ: ಪರಿಷ್ಕೃತ ಅಂಕಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 19:53 IST
Last Updated 30 ಮಾರ್ಚ್ 2019, 19:53 IST
   

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಸಮಾಜ ವಿಜ್ಞಾನ ಮತ್ತು ಉರ್ದು ವಿಷಯಗಳ ತಲಾ ಒಂದು ಪ್ರಶ್ನೆಗೆ ಆಯ್ಕೆಗಳನ್ನು ನೀಡುವಾಗ ಲೋಪವಾದ ಕಾರಣ, ಈ ಎರಡು ಪ್ರಶ್ನೆಗಳ ನಿರ್ದಿಷ್ಟ ಆಯ್ಕೆಗಳನ್ನು ಸರಿ ಉತ್ತರವೆಂದು ಗುರುತಿಸಿರುವ ಅಭ್ಯರ್ಥಿಗಳಿಗೆ ಅಂಕ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಸಮಾಜ ವಿಜ್ಞಾನ ವಿಷಯದಲ್ಲಿ ಪ್ರಶ್ನೆ ಸಂಖ್ಯೆ 117ರಲ್ಲಿ ‘ಪೂರ್ವ ಘಟ್ಟದ ಅತಿ ಎತ್ತರದ ಶಿಖರವೆಂದರೆ’ ಎಂದು ಕೇಳಲಾಗಿತ್ತು. ಅದಕ್ಕೆ ಆನೈಮುಡಿ, ಮಹೇಂದ್ರಗಿರಿ, ಕಾಂಚನಜುಂಗ, ಕಾಶಿ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ‘ಮಹೇಂದ್ರಗಿರಿ’ ಸರಿ ಉತ್ತರವೆಂದು ಕೀ ಉತ್ತರದಲ್ಲಿ ಪ್ರಕಟಿಸಲಾಗಿತ್ತು.

ಈ ಪ್ರಶ್ನೆಗೆ ಸಾವಿರಾರು ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ‘ಪೂರ್ವ ಘಟ್ಟಗಳಲ್ಲಿ ಅತ್ಯಂತ ಎತ್ತರದ ಶಿಖರ ‘ಅರಮಗೊಂಡ’ ಎಂಬ ಮಾಹಿತಿ ಕರ್ನಾಟಕ ಪಠ್ಯಪುಸ್ತಕ ಸಂಘ ಪ್ರಕಟಿಸಿರುವ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ 93 ಪುಟದಲ್ಲಿದೆ. ಈ ಆಯ್ಕೆಯನ್ನು ಪರೀಕ್ಷೆಯಲ್ಲಿ ನೀಡಿರಲಿಲ್ಲ’ ಎಂದು ಆಕ್ಷೇಪ ಎತ್ತಿದ್ದರು.

ADVERTISEMENT

‘ವಿಷಯ ತಜ್ಞರಿಂದ ಪರಿಶೀಲಿಸಿದ ಬಳಿಕ,ಪ್ರಶ್ನೆ ಸಂಖ್ಯೆ 117ಕ್ಕೆ ಬಂದ ಆಕ್ಷೇಪಣೆಗಳಲ್ಲಿ ನೈಜಾಂಶವಿದೆ ಎಂದು ದೃಢಪಟ್ಟಿದೆ. ಆದ್ದರಿಂದ ಮಹೇಂದ್ರಗಿರಿ ಎಂದು ಉತ್ತರಿಸಿದ ಅಭ್ಯರ್ಥಿಗಳಿಗೆ 1 ಅಂಕ ನೀಡಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಈ ಪ್ರಶ್ನೆಯನ್ನು ಪರಿಗಣಿಸದೆ, 149 ಅಂಕಗಳಿಗೆ ಮೌಲ್ಯೀಕರಿಸಲಾಗುತ್ತದೆ’ ಎಂದು ಇಲಾಖೆ ತಿಳಿಸಿದೆ.

‘ಉರ್ದು ಭಾಷೆ ವಿಷಯದ ಪ್ರಶ್ನೆ ಸಂಖ್ಯೆ 18ಕ್ಕೆ ಬಂದ ಆಕ್ಷೇಪಣೆಗಳ ಬಳಿಕ, ಇದರ 1 ಮತ್ತು 3ನೇ ಆಯ್ಕೆಗಳು ಸರಿ ಎಂದು ಸಂಪನ್ಮೂಲ ವ್ಯಕ್ತಿಗಳು ದೃಢಪಡಿಸಿದ್ದಾರೆ. ಹಾಗಾಗಿ ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಗುರುತಿಸಿರುವ ಅಭ್ಯರ್ಥಿಗಳಿಗೆ ಅಂಕ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.