ಬೆಂಗಳೂರು: ‘ಕೌಟುಂಬಿಕ ಚೌಕಟ್ಟು ಮೀರಿರುವ ಆಧುನಿಕ ಹೆಣ್ಣು ಮಕ್ಕಳಿಗೆ ಕುಂಕುಮ ನೀಡಲೂ ಯೋಚಿಸಬೇಕಾದ ಪರಿಸ್ಥಿತಿ ಇದೆ. ಸಂಸ್ಕಾರಕ್ಕೆ ಹೆಸರಾಗಿದ್ದ ಭಾರತೀಯ ನಾರಿಯರು, ಈಗ ಸಮಾನತೆಯ ಹೆಸರಿನಲ್ಲಿ ಸಾಗುತ್ತಿರುವ ಪರಿ ಭಯ ಹುಟ್ಟಿಸುತ್ತಿದೆ’ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಅಹಲ್ಯಾ ಶರ್ಮಾ ಹೇಳಿದರು.
ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಭಾರತೀಯ ನಾರಿ–ವ್ಯಕ್ತಿ ಮತ್ತು ಶಕ್ತಿ’ ಪ್ರಾಂತ ಮಾತೃಶಕ್ತಿ ಸಮ್ಮೇಳನದಲ್ಲಿ ಮಾತನಾಡಿದರು.
‘ಹೆಣ್ಣು ಮಕ್ಕಳಿಗೆ ಕೌಟುಂಬಿಕ ಚೌಕಟ್ಟು ಅಗತ್ಯ. ಇಲ್ಲವಾದಲ್ಲಿ ಸ್ವಾತಂತ್ರ್ಯಸ್ವೇಚ್ಛೆಯಾಗುವ ಸಾಧ್ಯತೆ ಇರುತ್ತದೆ. ಅದನ್ನು ಇತ್ತೀಚೆಗೆ ಕಾಣುತ್ತಿದ್ದೇವೆ. ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಮ್ ಹೋಮ್) ಸಂಸ್ಕೃತಿ ಬಂದ ಬಳಿಕ ಕೌಟುಂಬಿಕ ಸಂಬಂಧಗಳು ಕಳಚಿ ಹೋಗುತ್ತಿವೆ. ಕಚೇರಿಯ ಸಭೆಗಳಿದ್ದಲ್ಲಿ ಹಬ್ಬಗಳನ್ನು ಆಚರಿಸಲೂ ಸಮಯ ಇಲ್ಲವಾಗುತ್ತಿದೆ. ಸುಖದ ಪರಿಕಲ್ಪನೆಯೂ ಬದಲಾಗಿದ್ದು, ಎಲ್ಲವನ್ನೂ ದುಡ್ಡಿನಿಂದಲೇ ಅಳೆಯಲಾಗುತ್ತಿದೆ. ಮನೆಗಳನ್ನು ತಾರಾ ಹೋಟೆಲ್‌ಗಳ ಮಾದರಿ ನಿರ್ಮಿಸಿ, ಬೃಹತ್ ಕೊಠಡಿಗಳಲ್ಲಿ ಏಕಾಂಗಿ ಜೀವನ ಸಾಗಿಸುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಅಭಿಪ್ರಾಯಪಟ್ಟರು.
‘ರೀಲ್ಸ್‌ಗಳಲ್ಲಿ ಪತಿಯನ್ನು ಬೈಯುವುದು ಕಾಣುತ್ತಿದ್ದೇವೆ. ಸಮಾನತೆ ಬೇಕಾದರೂ, ಈ ರೀತಿಯ ನಡೆಯಿಂದಾಗಿ ಸಮಾಜ ಎತ್ತ ಸಾಗುತ್ತಿದೆಯೆಂಬ ಪ್ರಶ್ನೆ ಕಾಡುತ್ತಿದೆ’ ಎಂದರು.
ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತಾಧ್ಯಕ್ಷ ಸುಚೇಂದ್ರ ಪ್ರಸಾದ್, ‘ಹೆಣ್ಣು ಮಕ್ಕಳಿಗೆ ವರವಾಗಬೇಕಾಗಿದ್ದ ಉನ್ನತ ಶಿಕ್ಷಣ ಶಾಪವಾದಂತೆ ಭಾಸವಾಗುತ್ತಿದೆ. ನಾವು ಪರಸ್ಪರ ಅವಲಂಬಿತರೆಂದು ಸಮಾಜ ವಿಜ್ಞಾನ ಹೇಳುತ್ತದೆ. ಆದರೆ, ನಾವು ಯಾರನ್ನೂ ಅವಲಂಬಿಸುವುದಿಲ್ಲ ಎಂದರೆ ಹೇಗೆ? ಸಮೀಕ್ಷೆಯೊಂದರ ಪ್ರಕಾರ ಮುಂದಿನ ದಿನಗಳಲ್ಲಿ ಅವಿವಾಹಿತ ಯುವತಿಯರ ಸಂಖ್ಯೆ ಹೆಚ್ಚಳವಾಗಲಿದೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊಡ್ಡ ದೊಡ್ಡ ಪ್ಯಾಕೇಜ್ ಪಡೆಯುವ ಅವರು, ವಿವಾಹ ಮತ್ತು ಮಕ್ಕಳು ಪಡೆಯುವುದರಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ಬಗ್ಗೆಯೂ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾವು ಈಗ ಸ್ಥಿತ್ಯಂತರ ಕಾಲಘಟ್ಟದಲ್ಲಿದ್ದು, ಮೌಲ್ಯಾಧರಿತ ಕುಟುಂಬಕ್ಕೆ ಮಾತೃಶಕ್ತಿ ಅಗತ್ಯ’ ಎಂದು ಹೇಳಿದರು.
ಸಂಸ್ಕಾರ ಭಾರತೀಯ ಬೆಂಗಳೂರು ದಕ್ಷಿಣದ ಅಧ್ಯಕ್ಷೆ ಕರುಣಾ ವಿಜಯೇಂದ್ರ, ‘ಕಾಲೇಜು ಯುವತಿಯರಿಗೆ ಹಾಗೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.