ADVERTISEMENT

ಜಿಮ್‌: ನಕಲಿ ಬ್ರ್ಯಾಂಡ್‌ನ ಪೌಡರ್ ಮಾರಾಟ; 81 ಮಾದರಿಯಲ್ಲಿ 54 ನಕಲಿ

ಆಹಾರ ಸುರಕ್ಷತೆಯ ಅಧಿಕಾರಿಗಳ ಪರಿಶೀಲನೆ: 81 ಮಾದರಿಯಲ್ಲಿ 54 ನಕಲಿ

ನವ್ಯಾ ಪಾಲ ಕುನ್ನುಮ್ಮಲ್‌
Published 31 ಜನವರಿ 2023, 19:49 IST
Last Updated 31 ಜನವರಿ 2023, 19:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದ ಜಿಮ್‌ಗಳಲ್ಲಿ ಮಾರಾಟ ಮಾಡುತ್ತಿರುವ ಪೌಷ್ಟಿಕಾಂಶ ಪುಡಿಯ ಮಾದರಿ (ಪ್ರೊಟೀನ್‌ಯುಕ್ತ ಪೌಡರ್‌) ಅನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧಿಕಾರಿಗಳು ಸಂಗ್ರಹಿಸಿ ಪರಿಶೀಲಿಸಿದ್ದು, ಹಲವು ಕಡೆ ನಕಲಿ ಬ್ರ್ಯಾಂಡ್‌ನ ಪೌಡರ್‌ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ.

ರಾಜ್ಯದಲ್ಲಿ ಒಟ್ಟು 81 ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಆ ಪೈಕಿ 54 ನೈಜ ಬ್ರ್ಯಾಂಡ್‌ನ ಪುಡಿಗಳೇ ಅಲ್ಲ ಎಂಬುದು ದೃಢಪಟ್ಟಿದೆ.

ಚಿಕ್ಕಮಗಳೂರಿನ ಜಿಮ್‌ನಲ್ಲಿ ಮಾರುತ್ತಿದ್ದ ಪುಡಿ ಬಳಕೆಗೇ ಯೋಗ್ಯ ಆಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದೀಗ ಎಚ್ಚೆತ್ತಿರುವ ಸರ್ಕಾರ ಮಾರಾಟ ಹಾಗೂ ತಯಾರಕ ಕೇಂದ್ರಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಫಿಟ್‌ನೆಸ್‌ ಕಾಪಾಡಿಕೊಳ್ಳುವ ಉತ್ಸಾಹಿಗಳು ಈ ರೀತಿಯ ನಕಲಿ ಪುಡಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜತೆಗೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

‘ಎಫ್‌ಎಸ್‌ಎಸ್‌ಎಐ ಮಾನದಂಡದ ಪ್ರಕಾರ ಯಾವುದೇ ಲೇಬಲ್‌ ಹಾಕಿರಲಿಲ್ಲ. ಸಾವಯವ ಉತ್ಪನ್ನ, ಕೊಬ್ಬು ಮುಕ್ತವಾದ ಪುಡಿ ಎಂದು ನಮೂದಿಸಿದ್ದರೂ ಯಾವುದೇ ಅಧಿಕೃತ ಪ್ರಮಾಣಪತ್ರ ಇರಲಿಲ್ಲ. ತಯಾರಿಕೆ ದಿನಾಂಕ, ಅವಧಿ ಮುಗಿಯುವ ದಿನದ ವಿವರವೂ ಇರಲಿಲ್ಲ’ ಎಂದು ಪ್ರಾಧಿಕಾರದ ಜಂಟಿ ಆಯುಕ್ತ ಡಾ.ಹರೀಶ್ವರ ಹೇಳಿದರು.

54 ನಕಲಿ ಮಾದರಿಗಳ ಪೈಕಿ ಬೆಂಗಳೂರು ವ್ಯಾಪ್ತಿಯಲ್ಲೇ 17 ನಕಲಿ ಬ್ರ್ಯಾಂಡ್‌ ಪದಾರ್ಥಗಳು ಸಿಕ್ಕಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 27 ಮಾದರಿ ಸಂಗ್ರಹಿಸಲಾಗಿತ್ತು. ‘ಈ ರೀತಿ ನಕಲಿ ಪದಾರ್ಥಗಳ ಮಾರಾಟ ಹಾಗೂ ತಯಾರಕರ ವಿರುದ್ಧ ಕ್ರಮಕ್ಕೆ ಜಿಲ್ಲಾಮಟ್ಟದ ಅಧಿಕಾರಿ
ಗಳಿಗೆ ಸೂಚಿಸಲಾಗಿದೆ. ₹ 2 ಲಕ್ಷದ ವರೆಗೆ ದಂಡ ಹಾಕಲು ಅವಕಾಶವಿದೆ. ಗಂಭೀರ ಸ್ವರೂಪದ ಅಪರಾಧ ಪ್ರಕರಣ ಪತ್ತೆಯಾದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದೆ’ ಎಂದೂ ತಿಳಿಸಿದ್ದಾರೆ.

‘ಬಳಕೆಗೆ ಯೋಗ್ಯವಲ್ಲದ ಉತ್ಪನ್ನ ಮಾರಾಟಗಾರರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು. ಈ ಪ್ರಕರಣದಲ್ಲಿ ₹ 5 ಲಕ್ಷ ದಂಡ ಹಾಗೂ 6 ತಿಂಗಳ ತನಕ ಜೈಲು ಶಿಕ್ಷೆ ಆಗಲಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಈ ಪದಾರ್ಥಗಳನ್ನು ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಪರೀಕ್ಷೆಗೆ ಒಳಪಡಿಸಬಹುದು. ಅಲ್ಲಿನ ತಜ್ಞರು ನೀಡುವ ವರದಿಯನ್ನು ಅಂತಿಮಗೊಳಿಸಿ, ನಕಲಿ ಬ್ರ್ಯಾಂಡ್‌ ತಯಾರಕರ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ನಕಲಿ ಪುಡಿ ಪತ್ತೆಯಾದ ಸ್ಥಳ ಸಂಖ್ಯೆ:ಬೆಂಗಳೂರು 17, ಉಡುಪಿ 5, ಮೈಸೂರು 3, ಬಾಗಲಕೋಟೆ 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.