
ಬೆಂಗಳೂರು: ‘ಮಂಕುತಿಮ್ಮನ ಕಗ್ಗದಲ್ಲಿ ವಚನಗಳ ಮುಂದುವರಿಕೆ ಕಂಡುಬರುತ್ತದೆ. ಏಕಕಾಲದಲ್ಲಿ ಸಾಮಾಜಿಕ ಸಂಹಿತೆ ಮತ್ತು ಅಧ್ಯಾತ್ಮದ ಅನುಭಾವವನ್ನು ವಚನಗಳು ಕಟ್ಟಿಕೊಡುವಂತೆ ಮಂಕುತಿಮ್ಮನ ಕಗ್ಗವೂ ನಮಗೆ ನೀಡುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.
ಡಿವಿಜಿ ಕನ್ನಡ ಗೆಳೆಯರ ಬಳಗ ಕಹಳೆ ಬಂಡೆಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಡಿವಿಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
‘ಗದ್ಯ ಮತ್ತು ಪದ್ಯಗಳಷ್ಟೇ ಅಲ್ಲದೇ ಪತ್ರಿಕಾ ರಂಗದಲ್ಲಿಯೂ ಕೆಲಸ ಮಾಡಿದ್ದ ಡಿ.ವಿ. ಗುಂಡಪ್ಪ ಹೊಸಗನ್ನಡದ ಬೇಸಾಯಗಾರ’ ಎಂದು ಬಣ್ಣಿಸಿದರು.
ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ್, ವೀರಲೋಕದ ವೀರಕಪುತ್ರ ಶ್ರೀನಿವಾಸ್, ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷ ಸಮೀವುಲ್ಲಾಖಾನ್, ಬಸವನಗುಡಿ ವರ್ತಕರ ಸಂಘದ ಅಧ್ಯಕ್ಷ ವೆಂಕಟೇಶ್, ನ್ಯೂರೋ ಸರ್ಜನ್ ಡಾ. ಭಾನುಪ್ರಕಾಶ್, ಕೆವಿಕೆಯ ಹರ್ಷ, ಕಾಂಗ್ರೆಸ್ ಮುಖಂಡ ಬಲರಾಮ್, ಬಿಜೆಪಿ ನಾಯಕ ರುದ್ರೇಶ್, ಕನ್ನಡ ಹೋರಾಟಗಾರ್ತಿ ಭಾರತಿ ಗೌಡ, ಗೌಡರ ಸೇನೆಯ ಕೃಷ್ಣೇಗೌಡ, ಡಿವಿಜಿ ಕನ್ನಡ ಬಳಗದ ಟಿ ಶರ್ಟ್ ಜಗದೀಶ ಮುಳಬಾಗಿಲು ಭಾಗವಹಿಸಿದ್ದರು.
ಜಾಕಿ ಸಮೂಹದ ಸೀಮೇಂದ್ರ ಮತ್ತು ಗೆಳೆಯರು ಕನ್ನಡ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.