ADVERTISEMENT

ಮುಚ್ಚುವ ಸ್ಥಿತಿಗೆ ಕನ್ನಡ ಜ್ಞಾನಕೋಶ ‘ಕಣಜ’

ನಾಲ್ಕು ತಿಂಗಳಿಂದ ಸಿಬ್ಬಂದಿಗೆ ಪಾವತಿಯಾಗದ ವೇತನ * ಸಮನ್ವಯಕಾರ ಹುದ್ದೆಯೂ ಖಾಲಿ

ವರುಣ ಹೆಗಡೆ
Published 4 ಆಗಸ್ಟ್ 2023, 0:22 IST
Last Updated 4 ಆಗಸ್ಟ್ 2023, 0:22 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ಕನ್ನಡ ಆನ್‌ಲೈನ್‌ ವಿಶ್ವಕೋಶ ಎಂದೇ ಬಿಂಬಿತವಾಗಿದ್ದ ‘ಕಣಜ’ ಅಂತರ್ಜಾಲ ಕನ್ನಡ ಜ್ಞಾನಕೋಶವು ಮುಚ್ಚುವ ಸ್ಥಿತಿ ತಲುಪಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇದನ್ನು ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಸಿಲ್ಲ.

ಕನ್ನಡ ಭವನದ ಮೊದಲ ಮಹಡಿಯಲ್ಲಿ ಕಣಜ ವಿಭಾಗವು ಕಾರ್ಯನಿರ್ವಹಿಸುತ್ತಿದೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ಸಮಗ್ರ ಮಾಹಿತಿ ನೀಡಲು ಕರ್ನಾಟಕ ಜ್ಞಾನ ಆಯೋಗವು ‘ಕಣಜ’ವನ್ನು ಅಭಿವೃದ್ಧಿಪಡಿಸಿತ್ತು. ಇದನ್ನು 2015 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಇತ್ತೀಚೆಗೆ ತಾಂತ್ರಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಮೇಲಿಂದ ಮೇಲೆ ಈ ಜಾಲತಾಣ ಸ್ಥಗಿತಗೊಳ್ಳುತ್ತಿತ್ತು. ಸಿಬ್ಬಂದಿ ಕೊರತೆಯಿಂದಾಗಿ ಜ್ಞಾನದ ಆಕರಗಳು ಸಹ ನಿಯಮಿತವಾಗಿ ಜಾಲತಾಣಕ್ಕೆ ಸೇರ್ಪಡೆ ಆಗಿಲ್ಲ. ಇದು ಸಾಂಸ್ಕೃತಿಕ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ಕಣಜ ವಿಭಾಗಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕವಾದ ಸಿಬ್ಬಂದಿಗೆ ಇಲಾಖೆಯು ಏಪ್ರಿಲ್ ತಿಂಗಳಿಂದ ‌ವೇತನ ಪಾವತಿಸಿಲ್ಲ. ಕಣಜ ವಿಭಾಗ ನಿರ್ವಹಣೆಗೆ ಸಂಬಂಧಿಸಿದಂತೆ ಈವರೆಗೆ ಪ್ರತ್ಯೇಕ ಕಾರ್ಯಯೋಜನೆಯನ್ನೂ ರೂಪಿಸಿಲ್ಲ. ಇದರಿಂದಾಗಿ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, ಸಿಬ್ಬಂದಿಗೆ ವೇತನದ ಬಗ್ಗೆ ಖಚಿತತೆಯೂ ಇಲ್ಲವಾಗಿದೆ. ಈ ವಿಭಾಗ ನಿರ್ವಹಣೆ ಮಾಡುತ್ತಿದ್ದ ಸಮನ್ವಯಕಾರ ಹುದ್ದೆಯೂ ಕೆಲ ತಿಂಗಳಿಂದ ಖಾಲಿಯಿದ್ದು, ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಮಾಹಿತಿ ಸಂಗ್ರಹ ಸೇರಿ ವಿವಿಧ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದೆ. 

ADVERTISEMENT

ಅನುದಾನದ ಕೊರತೆ: ಮೊದಲು ಕಣಜವನ್ನು ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿಬಿ) ನಿರ್ವಹಿಸುತ್ತಿತ್ತು. ಬಳಿಕ ಇಲಾಖೆಯೇ ಕಣಜ ಸಮಿತಿ ರಚಿಸಿತು. ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಸಮಿತಿಯ ಅಧ್ಯಕ್ಷರಾಗಿದ್ದರೆ, ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸದ್ಯ ಎರಡು ವರ್ಷಗಳ ಹಿಂದೆ ಖರೀದಿಸಿದ್ದ ಲೇಖನಗಳು, ಸಾಹಿತ್ಯ ಕೃತಿಗಳು ಸೇರಿ ವಿವಿಧ ಮಾಹಿತಿಗಳನ್ನೇ ಡಿಜಿಟಲೀಕರಣ ಮಾಡಲಾಗುತ್ತಿದೆ. ಇತ್ತೀಚಿನ ಮಾಹಿತಿಗಳು ಕಣಜಕ್ಕೆ ಅಳವಡಿಕೆಯಾಗುತ್ತಿಲ್ಲ. ಅನುದಾನದ ಕೊರತೆಯಿಂದ ವಿವಿಧ ವಿಶ್ವವಿದ್ಯಾಲಯ ಹಾಗೂ ಸಂಸ್ಥೆಗಳಿಂದಲೂ ಸಾಹಿತ್ಯ ಸೇರಿ ವಿವಿಧ ಕೃತಿಗಳ ಖರೀದಿ ನಡೆಯುತ್ತಿಲ್ಲ. 

‘ನಾಲ್ಕು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರವು ಈ ಬಗ್ಗೆ ಗಮನ ಹರಿಸಿ, ವೇತನ ಪಾವತಿಗೆ ಕ್ರಮವಹಿಸಬೇಕು. ಅಗತ್ಯ ಅನುದಾನವನ್ನು ಒದಗಿಸುವ ಮೂಲಕ ಮಾಹಿತಿಗಳ ಡಿಜಿಟಲೀಕರಣಕ್ಕೆ ಪ್ರೋತ್ಸಾಹಿಸಬೇಕು’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿಯೊಬ್ಬರು ತಿಳಿಸಿದರು. 

****

ಕಣಜ ವಿಭಾಗದ ಗುತ್ತಿಗೆ ಸಿಬ್ಬಂದಿಯ ವೇತನ ಬಾಕಿ ಇರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಸಭೆ ನಡೆಸಿ ವಾರದಲ್ಲಿ ವೇತನ ಪಾವತಿಗೆ ವ್ಯವಸ್ಥೆ ಮಾಡುವೆ

-ವಿಶ್ವನಾಥ ಹಿರೇಮಠ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

ಪಾವತಿಯಾಗದ ಗೌರವಧನ

ಕಣಜಕ್ಕೆ ಅಗತ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಲು ವಿವಿಧ ವಿಶ್ವವಿದ್ಯಾಲಯಗಳು ಅಧ್ಯಯನ ಸಂಸ್ಥೆಗಳ ನೆರವನ್ನೂ ಪಡೆಯಲಾಗುತ್ತಿದೆ. ಇದಕ್ಕಾಗಿ ಒಪ್ಪಂದಗಳನ್ನೂ ಮಾಡಿಕೊಳ್ಳಲಾಗಿದೆ.  ಸಾಹಿತಿಗಳು ಲೇಖಕರು ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳನ್ನು ಅವರ ಸಮ್ಮತಿ ಪಡೆದು ಪ್ರಕಟಿಸಲಾಗುತ್ತದೆ. ಸೂಚಿತ ಅನುವಾದ ಮತ್ತು ಸ್ವತಂತ್ರ ಬರವಣಿಗೆಗಳಿಗೆ ಗೌರವ ಸಂಭಾವನೆ ಪಾವತಿಸಬೇಕು. ಆದರೆ ಈ ರೀತಿ ಬರವಣಿಗೆಗಳಿಗೆ ಈಗ ನಿಯಮಿತವಾಗಿ ಗೌರವ ಧನ ಪಾವತಿಯಾಗುತ್ತಿಲ್ಲ. ಇದು ಬರಹಗಾರರ ಅಸಮಾಧಾನಕ್ಕೆ ಕಾರಣವಾಗಿದೆ.  ‘ಆಂಗ್ಲ ಭಾಷೆಯ ಕೃತಿಯೊಂದನ್ನು ಕನ್ನಡಕ್ಕೆ ಅನುವಾದಿಸಿ ಕಣಜ ವಿಭಾಗಕ್ಕೆ ಹಲವು ದಿನಗಳ ಹಿಂದೆ ನೀಡಲಾಗಿತ್ತು. ಆದರೆ ಗೌರವಧನವನ್ನು ಈವರೆಗೂ ನೀಡಿಲ್ಲ. ಕನ್ನಡ ಭವನಕ್ಕೆ ಅಲೆದಾಡಿ ಸಾಕಾಗಿದೆ. ಇಲಾಖೆಯು ಬರಹಗಾರರನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ’ ಎಂದು ಲೇಖಕರೊಬ್ಬರು ಪ್ರಶ್ನಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.