ADVERTISEMENT

ಕನ್ನಡ ಸಂಘಗಳು ಜನರಿಗೆ ಸಾಂಸ್ಕೃತಿಕ ತಿಳಿವಳಿಕೆ ನೀಡಲಿ: ಬರಗೂರು ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 15:51 IST
Last Updated 19 ಏಪ್ರಿಲ್ 2022, 15:51 IST
ಪ್ರೊ.ಬರಗೂರು ರಾಮಚಂದ್ರಪ್ಪ
ಪ್ರೊ.ಬರಗೂರು ರಾಮಚಂದ್ರಪ್ಪ    

ಬೆಂಗಳೂರು: ‘ಕನ್ನಡ ಕೇಂದ್ರಿತವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ ಅಥವಾ ಸಂಘಟನೆಗಳ ಅಗತ್ಯ ಹಿಂದಿಗಿಂತಲೂ ಈಗ ಹೆಚ್ಚಿದೆ. ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಾಂಸ್ಕೃತಿಕ ತಿಳಿವಳಿಕೆ ಕೊಡುವ ಕೆಲಸವನ್ನು ಕಾಲೇಜು ಕನ್ನಡ ಸಂಘಗಳು ಮಾಡಬೇಕಿದೆ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕ್ರೈಸ್ಟ್‌ ವಿಶ್ವವಿದ್ಯಾಲಯದ ಕನ್ನಡ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

‘ಕನ್ನಡ ಕಟ್ಟುವುದು ಕನ್ನಡ ಬಲ್ಲವರು ಅಥವಾ ಕನ್ನಡ ಅಧ್ಯಾಪಕರ ಕೆಲಸವಷ್ಟೇ ಅಲ್ಲ. ಶ್ರೀನಿವಾಸ ರಾಜು ಅವರ ನೇತೃತ್ವದಲ್ಲಿ ಜನ್ಮತಾಳಿದ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೆಮ್ಮರವಾಗಿ ಬೆಳೆದಿದೆ. ಕರ್ನಾಟಕದಲ್ಲಿ ಹೆಸರಿಸಬಹುದಾದ ಕೆಲವೇ ಕನ್ನಡ ಸಂಘಗಳಲ್ಲಿ ಕ್ರೈಸ್ಟ್‌ ಕಾಲೇಜು ಕನ್ನಡ ಸಂಘವೂ ಒಂದು’ ಎಂದರು.

ADVERTISEMENT

‘ರಾಜ್ಯದಲ್ಲಿರುವ ಎಲ್ಲಾ ಕಾಲೇಜುಗಳಲ್ಲಿಯೂ ಕನ್ನಡ ಸಂಘ ಅಥವಾ ಸಾಂಸ್ಕೃತಿಕ ಸಂಘ ಇರಲೇಬೇಕು. ಆಗ ಅಲ್ಲಿನ ವಿದ್ಯಾರ್ಥಿಗಳಿಗೆ ಪಠ್ಯಬದ್ಧ ವ್ಯಾಸಂಗದ ಆಚೆಗೂ ಬದುಕು ನೋಡುವುದಕ್ಕೆ, ಒಟ್ಟು ಸಾಂಸ್ಕೃತಿಕ ವಲಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯ’ ಎಂದು ತಿಳಿಸಿದರು.

‘ಶಿಕ್ಷಣ ತಜ್ಞರ ಜಾಗವನ್ನು ಈಗ ಶಿಕ್ಷಣೋದ್ಯಮಿಗಳು ಆಕ್ರಮಿಸಿಕೊಂಡಿದ್ದಾರೆ. ಎಲ್ಲಿಯವರೆಗೆ ಜ್ಞಾನಮುಖಿ ಶಿಕ್ಷಣವಿರಬೇಕು, ಎಲ್ಲಿಂದ ಉದ್ಯೋಗಮುಖಿ ಶಿಕ್ಷಣವಿರಬೇಕು ಎಂಬ ಚಿಂತನೆ ಮಾಡದೆ, ಏಕಕಾಲದಲ್ಲಿ ಇಡೀ ವ್ಯವಸ್ಥೆಯೊಳಗೆ ಎಲ್ಲವನ್ನೂ ಕೊಡಬೇಕು ಎಂಬ ಕಲಬೆರಕೆ ಪದ್ಧತಿ ತರಲು ಪ್ರಯತ್ನಿಸಲಾಗುತ್ತಿದೆ’ ಎಂದು ದೂರಿದರು.

‘ಜ್ಞಾನಕ್ಕಿಂತ ಹೆಚ್ಚಾಗಿ ಉದ್ಯಮ ಪ್ರಧಾನವಾದ ಶಿಕ್ಷಣ ನೀಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಹೀಗಾಗಿ ಇಡೀ ಶಿಕ್ಷಣ ಕ್ಷೇತ್ರದ ಸ್ವರೂಪ ಅನಾರೋಗ್ಯಕರ ರೀತಿಯಲ್ಲಿ ಬದಲಾಗುತ್ತಿರುವುದನ್ನು ಕಾಣಬಹುದು. ಮೊದಲೆಲ್ಲಾ ಹೋಟೆಲ್‌ಗಳಿಗೆ ‘ಸ್ಟಾರ್‌’ ನೀಡುವ ಪದ್ಧತಿ ಇತ್ತು. ಈಗ ವಿಶ್ವವಿದ್ಯಾಲಯಗಳಿಗೂ ‘ಸ್ಟಾರ್‌’ ನೀಡಲಾಗುತ್ತಿದೆ. ಇಡೀ ಶಿಕ್ಷಣದ ಉದ್ದೇಶವೇ ಬದಲಾಗುತ್ತಿರುವುದಕ್ಕೆ ಇದು ನಿದರ್ಶನ’ ಎಂದರು.

‘ಉದ್ಯಮ ಕ್ಷೇತ್ರಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಲ್ಲಿರುವ ಉತ್ಪನ್ನಗಳನ್ನೆಲ್ಲಾ ಶಿಕ್ಷಣ ಕ್ಷೇತ್ರಕ್ಕೆ ತಂದು ಸುರಿಯಲಾಗುತ್ತಿದೆ. ತಂತ್ರಜ್ಞಾನವು ಮನುಷ್ಯರನ್ನು ಯಂತ್ರಗಳನ್ನಾಗಿ ರೂಪಾಂತರಿಸುತ್ತಿದೆ. ನಮ್ಮೊಳಗೆ ಇರುವ ಮನುಷ್ಯ ಮನಸ್ಸನ್ನು ನಾಶ ಮಾಡುವ ತಂತ್ರಜ್ಞಾನ ನಮಗೆ ಬೇಕಿಲ್ಲ’ ಎಂದು ಹೇಳಿದರು.

ಸಾಹಿತಿ ಡಾ.ಕೆ.ಮರುಳಸಿದ್ದಪ್ಪ, ‘ನಮ್ಮ ದೇಶ ಹಾಗೂ ರಾಜ್ಯದಲ್ಲಿ ಕಲುಷಿತ ಸಂದರ್ಭ ಸೃಷ್ಟಿಯಾಗಿದೆ. ಭಾರತವು ಹಲವು ಧರ್ಮಗಳು, ಸಾವಿರಾರು ಜಾತಿಗಳಿರುವ ದೇಶ. ಅದು ನಮ್ಮ ಶಕ್ತಿ. ಅದನ್ನು ಉಳಿಸಿಕೊಂಡು ಹೋಗುವ ಮೂಲಕ ದೇಶವನ್ನು ವಿಶ್ವಕ್ಕೆ ಮಾದರಿಯನ್ನಾಗಿ ರೂಪಿಸಬೇಕು. ಚರಿತ್ರೆಯ ಹಿಂದಿನ ಪಾಠಗಳನ್ನು ನೆನಪಿನಲ್ಲಿಟ್ಟುಕೊಂಡು ನಾವು ಮುಂದಡಿ ಇಡಬೇಕು’ ಎಂದು ತಿಳಿಸಿದರು.

‘ಇಂಗ್ಲಿಷ್‌ ನಮ್ಮ ದೇಸಿ ಭಾಷೆಗಳನ್ನು ಆಪೋಷಣ ತೆಗೆದುಕೊಂಡಿದೆ. ತಮ್ಮ ಆಡಳಿತವನ್ನು ಭದ್ರಪಡಿಸಿಕೊಳ್ಳಲು ಆಂಗ್ಲರು ಇಂಗ್ಲಿಷ್‌ ಮಾಧ್ಯಮ ಹೇರಿದರು. ಬರ್ಮಿಂಗ್‌ಹ್ಯಾಮ್‌ನ ಬಟ್ಟೆ ಗಿರಣಿಗಳನ್ನು ಭದ್ರಪಡಿಸುವುದಕ್ಕಾಗಿ ನಮ್ಮ ಕೈಮಗ್ಗಗಳನ್ನು ನಾಶಪಡಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಕ್ರೈಸ್ತ ಪಾದ್ರಿಗಳು ನಮ್ಮ ದೇಶದ ಕೆಳಜಾತಿಯ ಜನರಿಗೆ ಆಮಿಷ ಒಡ್ಡಿ ಮತಾಂತರ ಮಾಡಿದ್ದರು. ಇವೆಲ್ಲಾ ಸತ್ಯ ಸಂಗತಿಗಳು. ಇದರ ಜೊತೆಗೆ ಅವರು ಮಾಡಿದ ಒಳ್ಳೆಯ ಕೆಲಸಗಳನ್ನೂ ನಾವು ಸ್ಮರಿಸಬೇಕು’ ಎಂದು ಹೇಳಿದರು.

‘ಇಂಗ್ಲಿಷ್‌ ಭಾಷೆ ಕಾಲಿಡದೆ ಹೋಗಿದ್ದರೆ ಈ ದೇಶ ಒಗ್ಗೂಡುತ್ತಲೇ ಇರಲಿಲ್ಲ. ಇಂಗ್ಲಿಷ್‌, ಸ್ವಾತಂತ್ರ್ಯ ಚಳವಳಿಗೆ ಪ್ರೇರಕವಾದದ್ದು. ಇಂಗ್ಲಿಷ್‌ ಸಾಹಿತ್ಯ, ರಂಗಭೂಮಿ ನಮ್ಮ ಮೇಲೆ ಬಹುದೊಡ್ಡ ಪ್ರಭಾವ ಬೀರಿವೆ. ಅದನ್ನೂ ನಾವು ಸ್ಮರಿಸಬೇಕು. ಸಾರ್ವತ್ರಿಕ ಶಿಕ್ಷಣ ಈ ದೇಶಕ್ಕೆ ಬಂದಿದ್ದೇ ಇಂಗ್ಲಿಷರಿಂದ. ಅದಕ್ಕೂ ಮುನ್ನ ಶೇ 99 ರಷ್ಟು ಮಂದಿ ಅನಕ್ಷರಸ್ಥರಾಗಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.