ಬೆಂಗಳೂರು: ತಾಯಿಯಿಂದಲೇ ಹತನಾದ ನಾಲ್ಕು ವರ್ಷದ ಬಾಲಕ ಚಿನ್ಮಯ್ ಅಂತ್ಯಕ್ರಿಯೆ ಇಲ್ಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಇಂದು(ಬುಧವಾರ) ನಡೆಯಿತು.
ಅಂತಿಮ ವಿಧಿ ವಿಧಾನವನ್ನು ತಂದೆ ವೆಂಕಟರಮಣ್ ನೆರವೇರಿಸಿದ್ದು, ಅಂತ್ಯಕ್ರಿಯೆ ವೇಳೆ ಕುಟುಂಬದ ಸದಸ್ಯರು ಹಾಜರಿದ್ದರು. ಮಗನ ಮೃತದೇಹ ಮಣ್ಣು ಮಾಡುವ ವೇಳೆ ತಂದೆ ವೆಂಕಟರಮಣ್ ತೀವ್ರ ಭಾವುಕರಾದರು. ಕುಟುಂಬ ಸದಸ್ಯರು ಅವರನ್ನು ಸಮಾಧಾನ ಮಾಡಿದ್ದಾರೆ.
ಆರೋಪಿ ಸುಚನಾ ಸೇಠ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ಆರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.
ದಾಂಪತ್ಯದಲ್ಲಿ ಬಿರುಕು, ಮಗನ ಕೊಲೆ?
‘ಮೈಂಡ್‌ಫುಲ್ ಎ.ಐ ಲ್ಯಾಬ್’ ಕಂಪನಿಯ ಸಿಇಒ ಸುಚನಾ ಸೇಠ್ ಮೂಲತಃ ಕೋಲ್ಕತ್ತದವರು. ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಸೇಠ್, 2008ರಲ್ಲಿ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. 2010ರಲ್ಲಿ ವೆಂಕಟರಮಣ್ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ 2019ರಲ್ಲಿ ಪುತ್ರ ಚಿನ್ಮಯ್ ಜನಿಸಿದ್ದ. ಈ ವೇಳೆಗಾಗಲೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಚ್ಚೇದನದ ನಂತರ ವಾರದ ಒಂದು ದಿನ ಮಗನನ್ನು ನೋಡಲು ತಂದೆ ವೆಂಕಟರಮಣ್ ಬರುತ್ತಿದ್ದು, ಇದು ಸುಚನಾಗೆ ಇಷ್ಟವಿರಲಿಲ್ಲ. ಈ ಕಾರಣಕ್ಕೆ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸೂಟ್‌ಕೇಸ್‌ನಲ್ಲಿ ಮಗನ ಶವ
ಉತ್ತರ ಗೋವಾದ ಹೋಟೆಲ್‌ವೊಂದರ ಕೊಠಡಿಯನ್ನು ಜ. 6ರಂದು ಬಾಡಿಗೆ ಪಡೆದು ಪುತ್ರನೊಂದಿಗೆ ತಂಗಿದ್ದ ಸುಚನಾ, ಪುತ್ರನನ್ನು ಕೊಲೆ ಮಾಡಿ ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸಲು ಯತ್ನಿಸಿದ್ದರು.
ಉಸಿರುಗಟ್ಟಿಸಿ ಕೊಲೆ?
ಮೃತ ಬಾಲಕನ ಮುಖ ಹಾಗೂ ಎದೆಯಲ್ಲಿ ಊತ ಕಾಣಿಸಿಕೊಂಡಿದ್ದು, ಕುತ್ತಿಗೆ ಭಾಗದಲ್ಲಿ ಉಸಿರುಕಟ್ಟಿಸಿ ಕೊಲೆ ಮಾಡಿದ ಸಾಧ್ಯತೆ ಇದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ.ಕುಮಾರ್ ನಾಯ್ಕ ಅವರು ತಿಳಿಸಿದ್ದಾರೆ.
ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನ
ಹೋಟೆಲ್ ಕೊಠಡಿಯಲ್ಲಿ ಕತ್ತು ಹಿಸುಕಿ ಪುತ್ರನನ್ನು ಕೊಲೆ ಮಾಡಿರುವ ಸುಚನಾ, ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೈ ಕೊಯ್ದುಕೊಳ್ಳಲು ಪ್ರಯತ್ನಿಸಿದಾಗ ರಕ್ತ ಕೊಠಡಿಯಲ್ಲಿ ಬಿದ್ದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಬದಲಿಸಿದ ಆರೋಪಿ, ಬಾಲಕನ ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿದ್ದಾರೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.