ADVERTISEMENT

ಬೆಂಗಳೂರು | ಮನೆಯ ಬಾಗಿಲಿಗೆ ಶೀಟ್‌ ಬಡಿದು ಸೀಲ್‌ ಡೌನ್‌

ಶಾಂತಿನಗರ ಕಾರ್ಯಪಾಲಕ ಎಂಜಿನಿಯರ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2020, 19:58 IST
Last Updated 23 ಜುಲೈ 2020, 19:58 IST
ಶಾಂತಿನಗರ ಕ್ಷೇತ್ರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಮನೆಗೆ ಸೀಲ್‌ಡೌನ್‌ ಮಾಡಿರುವ ಪರಿ
ಶಾಂತಿನಗರ ಕ್ಷೇತ್ರದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಮನೆಗೆ ಸೀಲ್‌ಡೌನ್‌ ಮಾಡಿರುವ ಪರಿ   

ಬೆಂಗಳೂರು: ಶಾಂತಿನಗರ ಕ್ಷೇತ್ರದಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಕಬ್ಬಿಣದ ಶೀಟ್‌ಗಳನ್ನು ಬಡಿದು ಸೀಲ್‌ಡೌನ್‌ ಮಾಡಲಾಗಿದೆ.

ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸತೀಶ್‌ ಸಂಗಮೇಶ್ವರನ್ ಎಂಬುವರು ಟ್ವೀಟ್‌ ಮಾಡಿದ್ದರು. ‘ಒಂದು ಮನೆಯಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳೆ ಇದ್ದಾರೆ. ಪಕ್ಕದ ಮನೆಯಲ್ಲಿ ಇಬ್ಬರು ವಯಸ್ಸಾದವರು ವಾಸಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡರೆ ಅವರೇನು ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಕಂಟೈನ್‌ಮೆಂಟ್‌ ಮಾಡಬೇಕು ನಿಜ. ಅದರೆ, ಇದು ಅತಿರೇಕದ ಪರಮಾವಧಿ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಸೀಲ್‌ಡೌನ್‌ ಮಾಡುವಾಗ ಮಾದರಿ ನಿಯಮಾವಳಿಗಳನ್ನು ಪಾಲಿಸದ ಬಗ್ಗೆ ಶಾಂತಿನಗರ ವಿಧಾನಸಭಾ ಕ್ಷೇತ್ರ ಕಾರ್ಯಪಾಲಕ ಎಂಜಿನಿಯರ್ ರಾಧಾಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಗಿಲಿಗೆ ಬಡಿದಿರುವ ಶೀಟ್‌ಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ADVERTISEMENT

ಪಾಲಿಕೆ ಆಯುಕ್ತರ ಸೂಚನೆ ಮೇರೆಗೆ ಪೂರ್ವ ವಲಯದ ಜಂಟಿ ಆಯುಕ್ತರು ಕಾರ್ಯಪಾಲಕ ಎಂಜಿನಿಯರ್‌ ರಾಧಾಕೃಷ್ಣ ಅವರಿಗೆ ಷೋಕಾಸ್‌ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಂಜುನಾಥ ಪ್ರಸಾದ್‌, ‘ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡುವಾಗ ಸರ್ಕಾರ ರೂಪಿಸಿರುವ ಮಾದರಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.