ADVERTISEMENT

ಬಿಬಿಎಂಪಿ ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ್ದ ಆಸ್ತಿ ವಿವರವೇ ನಾಪತ್ತೆ!

ಎನ್‌. ಆರ್. ರಮೇಶ್ ಆಸ್ತಿ ವಿವರ ಕೋರಿದ್ದ ಆರ್‌ಟಿಐ ಕಾರ್ಯಕರ್ತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 21:44 IST
Last Updated 2 ಜನವರಿ 2023, 21:44 IST
ಬಿಬಿಎಂಪಿ
ಬಿಬಿಎಂಪಿ    

ಬೆಂಗಳೂರು: ಹಿಂದಿನ ಬಿಬಿಎಂಪಿ ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ್ದ ಆಸ್ತಿ ವಿವರವೇ ನಾಪತ್ತೆಯಾಗಿದೆ! ಮಾಹಿತಿ ಹಕ್ಕು ಕಾಯ್ದೆಯಡಿ ಆರ್‌ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿ ಕಚೇರಿಯಿಂದ ಕಚೇರಿಗೆ ವರ್ಗಾವಣೆಯಾಗಿ, ಕೊನೆಗೂ ‘ಲಭ್ಯವಿಲ್ಲ’ ಎಂಬ ಉತ್ತರದೊಂದಿಗೆ ಕೊನೆಯಾಗಿದೆ.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಡಿಯೂರು ವಾರ್ಡ್‌ನ ಈ ಹಿಂದಿನ ಸದಸ್ಯರು(2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎನ್.ಆರ್.ರಮೇಶ್‌ ಮತ್ತು 2015ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪೂರ್ಣಿಮಾ ರಮೇಶ್‌) ಚುನಾವಣೆ ವೇಳೆ ಸಲ್ಲಿಸಿದ್ದ ಆಸ್ತಿ ವಿವರದ ಮಾಹಿತಿಯನ್ನು ಮಾಹಿತಿ ಹಕ್ಕು ಹೋರಾಟಗಾರ ವಿ.ಶಶಿಕುಮಾರ್ ಕೋರಿದ್ದರು.

2022ರ ಸೆಪ್ಟೆಂಬರ್‌ 14ರಂದು ಬೆಂಗಳೂರು ದಕ್ಷಿಣ ಚುನಾವಣಾ ಶಾಖೆಯ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಬನಶಂಕರಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗೆ ಅವರು ವರ್ಗಾಯಿಸಿದರು. ಅವರು ಅದನ್ನು ಪದ್ಮನಾಭನಗರದ ಕಾರ್ಯಪಾಲಕ ಎಂಜಿನಿಯರ್‌ಗೆ ವರ್ಗಾಯಿಸಿದರು.

ADVERTISEMENT

ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅಥವಾ ದಾಖಲೆಗಳು ಈ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಕಾರ್ಯಪಾಲಕ ಎಂಜಿನಿಯರ್‌ ಪತ್ರವನ್ನು ಹಿಂದಿರುಗಿಸಿದರು. ಈ ಪತ್ರ ಬಂದು ಒಂದು ತಿಂಗಳಾದರೂ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಕಂದಾಯ ಅಧಿಕಾರಿಗೆ ಶಶಿಕುಮಾರ್ ಮೇಲ್ಮನವಿ ಸಲ್ಲಿಸಿದರು. ಅವರು ನವೆಂಬರ್ 19ರಂದು ವಿಚಾರಣೆಗೆ ದಿನಾಂಕ ನಿಗದಿ ಮಾಡಿದರು. ಅಷ್ಟರಲ್ಲಿ ನವೆಂಬರ್ 18ರಂದು ಸಹಾಯಕ ಕಂದಾಯ ಅಧಿಕಾರಿಯು ಜಿಲ್ಲಾ ಚುನಾವಣಾಧಿಕಾರಿ(ಪಾಲಿಕೆಯ ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ) ಅವರಿಗೆ ಪತ್ರ ಬರೆದು ಮಾಹಿತಿ ಇದ್ದರೆ ಒದಗಿಸಲು ಕೋರಿದ್ದರು.

ಚುನಾವಣೆ ಮುಗಿದ ಬಳಿಕ ಈ ದಾಖಲೆಗಳನ್ನು ಸಲ್ಲಿಸಿರುವುದಕ್ಕೆ ಸ್ವೀಕೃತಿ ಪತ್ರ ಒದಗಿಸಿದಲ್ಲಿ ಪರಿಶೀಲಿಸಲಾಗುವುದು ಎಂದು ಹೆಚ್ಚುವರಿ ಆಯುಕ್ತರ ಕಚೇರಿಯಿಂದ ಡಿಸೆಂಬರ್ 16ರಂದು ಉತ್ತರ ಬಂದಿತ್ತು. ಎಲ್ಲಿಯೂ ದಾಖಲೆಗಳು ಸಿಗದಿದ್ದರಿಂದ ಬನಶಂಕರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಯು ಅರ್ಜಿದಾರರಿಗೆ ಪತ್ರವೊಂದನ್ನು ನೀಡಿದ್ದಾರೆ. ‘ಹಿಂದಿನ ಅಧಿಕಾರಿಗಳು ದಾಖಲೆಗಳನ್ನು ವರ್ಗಾಯಿಸದ ಕಾರಣ ಈ ಕಚೇರಿಯಲ್ಲಿ ಮಾಹಿತಿ
ಲಭ್ಯವಿರುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಚುನಾವಣೆ ವೇಳೆ ಸಲ್ಲಿಸಿದ್ದ ಆಸ್ತಿ ವಿವರದ ದಾಖಲೆಗಳೇ ಲಭ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಮಾಹಿತಿ ನೀಡಲು ಅಧಿಕಾರಿಗಳಿಗೆ ಭಯವೂ ಕಾಡುತ್ತಿರಬಹುದು. ಕರ್ನಾಟಕ ಮಾಹಿತಿ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದು ಶಶಿಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.