ಬೆಂಗಳೂರು: ‘ಆಹಾರದಲ್ಲಿ ಅತಿಯಾಗಿ ಉಪ್ಪು ಬಳಕೆ ಮಾಡುವುದರಿಂದ ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಮತ್ತು ಮೂತ್ರಪಿಂಡ ಕಾಯಿಲೆ ಸೇರಿ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಆಹಾರದಲ್ಲಿ ಉಪ್ಪಿನ ಬಳಕೆ ಕಡಿಮೆಗೊಳಿಸುವ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ, ಪ್ರತ್ಯೇಕ ಕಾರ್ಯಯೋಜನೆ ರೂಪಿಸಬೇಕು’ ಎಂದು ವೈದ್ಯಕೀಯ ತಜ್ಞರು ನಿರ್ಣಯ ಕೈಗೊಂಡರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ರಚನೆಯಾದ ತಾಂತ್ರಿಕ ಸಲಹಾ ಸಮಿತಿಯು ನಗರದಲ್ಲಿ ಗುರುವಾರ ಪ್ರಥಮ ಸಭೆ ನಡೆಸಿ, ಆಹಾರದಲ್ಲಿ ಉಪ್ಪಿನ ಬಳಕೆ ಕಡಿಮೆ ಮಾಡಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಿತು. ಸಾಂಕ್ರಾಮಿಕವಲ್ಲದ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ‘ಹಾಲ್ಟ್-ಸಾಲ್ಟ್’ ಅಭಿಯಾನ ನಡೆಸುವುದು, ಉಪ್ಪಿನ ಬಳಿಕೆ ಕಡಿಮೆಗೊಳಿಸಲು ಕಾರ್ಯಯೋಜನೆಗಳನ್ನು ರೂಪಿಸಿ, ಅವನ್ನು ಕಾರ್ಯಗತಗೊಳಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಭೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಯುವ ಪೀಳಿಗೆ ಗುರಿ: ವಿಶ್ವವಿದ್ಯಾಲಯದ ಕುಲಪತಿ ಭಗವಾನ್ ಬಿ.ಸಿ., ‘ವಿಶ್ವವಿದ್ಯಾಲಯವು ಕೇವಲ ದಾಖಲಾತಿ, ಪರೀಕ್ಷೆ, ಫಲಿತಾಂಶ ಹಾಗೂ ತರಗತಿಯ ಚಟುವಟಿಕೆಗಳಿಗೆ ಸೀಮಿತವಾಗಿ ಉಳಿಯಬಾರದು. ಯುವ ಪೀಳಿಗೆಯ ಆರೋಗ್ಯ ವೃದ್ಧಿಗೆ ಸಹಕಾರಿಯಾದ ಕಾರ್ಯಕ್ರಮಗಳನ್ನು ರೂಪಿಸಬೇಕು. ಯುವಜನರು ಅಧಿಕ ರಕ್ತದೊತ್ತಡದಂತಹ ಅನಾರೋಗ್ಯ ಸಮಸ್ಯೆಗಳಿಗೆ ಒಳಪಡುತ್ತಿರುವುದು ಕಳವಳಕಾರಿ’ ಎಂದು ಹೇಳಿದರು.
ರಿಸಾಲ್ವ್ ಟು ಸೇವ್ ಲೈವ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸೈಯದ್ ಇಮ್ರಾನ್ ಫಾರೂಕ್, ‘ಉಪ್ಪು ಸೇವನೆಗೆ ಕಡಿವಾಣ ಹಾಕುವುದು ಅತ್ಯಂತ ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಪರಿಹಾರಗಳಲ್ಲಿ ಒಂದಾಗಿದೆ. ಕರ್ನಾಟಕವು ಸೋಡಿಯಂ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ, ಅದರಿಂದ ಉಂಟಾಗಬಹುದಾದ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ವಿಧಾನಗಳನ್ನು ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದರು.
ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ಯು.ಎಸ್., ‘ನಾವು ಚಿಕಿತ್ಸೆಗೆ ನೀಡುವಷ್ಟೇ ಪ್ರಾಮುಖ್ಯವನ್ನು ಮುನ್ನೆಚ್ಚರಿಕೆಗೆ ನೀಡಿದಲ್ಲಿ ಇಲ್ಲಿನ ಅನಾರೋಗ್ಯ ಸಮಸ್ಯೆಗಳು ಅರ್ಧದಷ್ಟು ಇಳಿಮುಖವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ವೈದ್ಯರ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ವಿವಿ ರಿಜಿಸ್ಟ್ರಾರ್ ಡಾ. ರಿಯಾಜ್ ಬಾಷ, ಜಯದೇವ ಹೃದಯೋಗ ಸಂಸ್ಥೆಯ ಡಾ. ಶ್ರೀಧರ್, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಾಲಜಿಯ ಡಾ. ರವಿ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ. ಕಾವ್ಯ ಹಾಗೂ ವಿವಿಧ ವೈದ್ಯಕೀಯ ಸಂಸ್ಥೆಗಳ ವೈದ್ಯಕೀಯ ತಜ್ಞರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.