ಡಾ.ಹೊ. ಶ್ರೀನಿವಾಸಯ್ಯ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವೂಡೇ ಪಿ. ಕೃಷ್ಣ, ಎಚ್.ಕೆ. ಪಾಟೀಲ, ರಾಮಚಂದ್ರ ರಾಹಿ, ಎಸ್.ಜಿ. ಸಿದ್ದರಾಮಯ್ಯ, ಡಿ.ಆರ್. ಪಾಟೀಲ, ಶಶಿಕೃಷ್ಣ ಅವರು ಹೊ. ಶ್ರೀನಿವಾಸಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸಮಾಜದಲ್ಲಿ ಮಹಾತ್ಮ ಗಾಂಧೀಜಿ ತತ್ವ ಸಿದ್ಧಾಂತಗಳು, ವಿಚಾರಧಾರೆಗಳ ಬಗೆಗಿನ ಗಂಭೀರತೆ ಕುಸಿಯುತ್ತಿದೆ’ ಎಂದು ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಇಲಾಖೆ, ಬೆಂಗಳೂರು ನಗರ ವಿಶ್ವವಿದ್ಯಾಲಯ, ಡಾ.ಹೊ. ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ನಡೆದ ‘ಡಾ.ಹೊ. ಶ್ರೀನಿವಾಸಯ್ಯ ಜನ್ಮ ಶತಮಾನೋತ್ಸವ ಆಚರಣೆ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಹೊ. ಶ್ರೀನಿವಾಸಯ್ಯ ಅವರು ಗಾಂಧೀಜಿ ಅವರನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಬಹಳಷ್ಟು ಮಂದಿಗೆ ತಿಳಿಸಿದ್ದಾರೆ. ಶ್ರೀನಿವಾಸಯ್ಯ ಅವರು ರಾಜ್ಯದ ವಿವಿಧ ಶಾಲಾ–ಕಾಲೇಜುಗಳಲ್ಲಿ ಗಾಂಧೀಜಿ ಅವರ ಕುರಿತಾಗಿ ಎರಡು ಸಾವಿರ ಉಪನ್ಯಾಸಗಳನ್ನು ನೀಡಿದ್ದಾರೆ. ಶಿಸ್ತು, ವಿನಯ, ದಿಟ್ಟತನ, ಗಟ್ಟಿತನವನ್ನು ಒಬ್ಬ ವ್ಯಕ್ತಿಯಲ್ಲಿ ಕಾಣಬೇಕಾದರೆ, ಅದು ಹೊ. ಶ್ರೀನಿವಾಸಯ್ಯ ಅವರಲ್ಲಿ ಮಾತ್ರ ಕಂಡುಕೊಳ್ಳಬಹುದಾಗಿತ್ತು’ ಎಂದು ಸ್ಮರಿಸಿದರು.
ಕೇಂದ್ರ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ರಾಮಚಂದ್ರ ರಾಹಿ, ‘ಶ್ರೀನಿವಾಸಯ್ಯ ಅವರು ಒಬ್ಬ ಮಾನವತಾವಾದಿ ಆಗಿದ್ದರು. ಸದ್ಯದ ರಾಜಕೀಯ ವ್ಯವಸ್ಥೆ ಮತದಾರರನ್ನು ಗುಲಾಮರು, ಭಿಕ್ಷುಕರನ್ನಾಗಿ ಮಾಡಿದೆ. ಆದ್ದರಿಂದ, ಮತದಾರರು ಸಂವಿಧಾನ ನೀಡಿದ ಹಕ್ಕುಗಳಿಗಾಗಿ ಹೋರಾಟ ಮಾಡಬೇಕಾಗಿದೆ. ವಿಶ್ವಕ್ಕೆ ಗಾಂಧಿ ಅವರ ಸಂದೇಶ ನೀಡುವಲ್ಲಿ ನಾವು ವಿಫಲರಾಗಿದ್ದೇವೆ. ಜಗತ್ತು ಹಿಂಸೆ ಕಡೆಗೆ ಸಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ. ಕೃಷ್ಣ, ಉಪಾಧ್ಯಕ್ಷ ಎಸ್.ಜಿ. ಸಿದ್ಧರಾಮಯ್ಯ, ನಿರ್ದೇಶಕ ಜಿ.ಬಿ. ಶಿವರಾಜು, ಕೆ.ಎಚ್. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್. ಪಾಟೀಲ, ಎಸ್‌ಜೆಆರ್‌ಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೇಮ ಸಿದ್ಧರಾಜು, ಡಾ. ಹೊ. ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷೆ ಶಶಿಕೃಷ್ಣ ಭಾಗವಹಿಸಿದ್ದರು.
ದೇಶದ ಪ್ರಧಾನಮಂತ್ರಿ ಯಾವ ಗುಣಮಟ್ಟದ ನೀರು ಕುಡಿಯುತ್ತಾರೋ ಅದೇ ಗುಣಮಟ್ಟದ ನೀರು ಹಳ್ಳಿಯ ಕಟ್ಟಕಡೆಯ ವ್ಯಕ್ತಿಯು ಕುಡಿಯುವಂತಾಗಬೇಕು ಎಂಬ ಕಾರಣಕ್ಕೆ ಪ್ರತಿಯೊಂದು ಹಳ್ಳಿಯಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿದ್ದೇವೆ.ಎಚ್.ಕೆ. ಪಾಟೀಲ ಕಾನೂನು ಸಂಸದೀಯ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.