ADVERTISEMENT

ಮೂಟೆ ಕದ್ದು ಪರಾರಿಯಾಗಿದ್ದರು; ಬೈಕ್ ಕದ್ದು ಸೆರೆಸಿಕ್ಕರು

ಆಭರಣ ಮಳಿಗೆ, ಮನೆಗಳಲ್ಲಿ ಕಳವು ಮಾಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:36 IST
Last Updated 7 ಆಗಸ್ಟ್ 2020, 16:36 IST

ಬೆಂಗಳೂರು: ರಸ್ತೆಯಲ್ಲಿ ಕಸಗುಡಿಸುವ ಹಾಗೂ ಕಾಲುವೆ ಸ್ವಚ್ಛಗೊಳಿಸುವ ಸೋಗಿನಲ್ಲಿ ಆಭರಣ ಮಳಿಗೆ ಮತ್ತು ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ಮೂವರನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

‘ನಾಗರಾಜು, ಸಂತೊಷ್ ಹಾಗೂ ದಿಲೀಪ್ ಬಂಧಿತರು. ಸುಬ್ರಹ್ಮಣ್ಯನಗರ, ಹಲಸೂರು ಗೇಟ್, ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.

‘ನಸುಕಿನಲ್ಲಿ ಮನೆಗಳಲ್ಲಿ ಗುರುತಿಸುತ್ತಿದ್ದ ಆರೋಪಿಗಳು, ರಾತ್ರಿ ವೇಳೆ ಕಳವು ಮಾಡುತ್ತಿದ್ದರು. ಇತ್ತೀಚೆಗೆ ಪ್ರಕಾಶ್ ಎಂಬುವರ ದ್ವಿಚಕ್ರ ವಾಹನ ಕದ್ದು ಪರಾರಿಯಾಗಿದ್ದರು. ಆ ಬಗ್ಗೆ ದಾಖಲಾಗಿದ್ದ ದೂರಿನ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು’ ಎಂದೂ ತಿಳಿಸಿದರು.

ADVERTISEMENT

ಮಣ್ಣಿನ ಮೂಟೆ ಕದ್ದಿದ್ದರು; ‘ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಅಕ್ಕಸಾಲಿಗರ ಮಳಿಗೆಯೊಂದಕ್ಕೆ ನುಗ್ಗಿದ್ದ ಆರೋಪಿಗಳು, ಎರಡು ಮೂಟೆ ಮಣ್ಣು ಕದ್ದಿದ್ದರು. ನಂತರ ಮೂಟೆಗಳನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆಭರಣ ಕದಿಯಲೆಂದು ಆರೋಪಿಗಳು ಮಳಿಗೆಗೆ ನುಗ್ಗಿದ್ದರು. ಆದರೆ, ಆಭರಣಗಳು ಸಿಕ್ಕಿರಲಿಲ್ಲ. ಮಣ್ಣಿನಲ್ಲಿ ಚಿನ್ನದ ಕಣಗಳು ಇರಬಹುದೆಂದು ತಿಳಿದು ಮೂಟೆಗಳನ್ನು ಕದ್ದಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.