ADVERTISEMENT

ಶಾಲೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳು 22 ವರ್ಷಗಳ ಬಳಿಕ ಸೆರೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 4:36 IST
Last Updated 28 ಫೆಬ್ರುವರಿ 2023, 4:36 IST
ಅಣ್ಣಾದೊರೈ, ವೀರಮಲೈ, ಬಾಬು
ಅಣ್ಣಾದೊರೈ, ವೀರಮಲೈ, ಬಾಬು   

ಬೆಂಗಳೂರು: ನಗರದ ಹಲವು ಶಾಲೆ–ಕಾಲೇಜುಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಮೂವರು ಆರೋಪಿಗಳು, 22 ವರ್ಷಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

‘ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಶಾಲೆಯೊಂದರ ಬೀಗ ಮುರಿದು ಇತ್ತೀಚೆಗೆ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ತಮಿಳುನಾಡಿನ ಅಣ್ಣಾ ದೊರೈ (42), ವೀರಮಲೈ ಅಲಿಯಾಸ್ ಕುಮಾರ್ (40) ಹಾಗೂ ಬಾಬು (34) ಬಂಧಿತರು. ಇವರಿಂದ ₹ 5 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

2001ರಿಂದ ಕೃತ್ಯ; ‘ಒಂದೇ ರಾಜ್ಯದವರಾಗಿದ್ದ ಮೂವರು ಆರೋಪಿಗಳು, ಕಳ್ಳತನಕ್ಕೆಂದು ತಂಡ ಕಟ್ಟಿಕೊಂಡಿದ್ದರು. 2001ರಿಂದ ಶಾಲೆ–ಕಾಲೇಜುಗಳಲ್ಲಿ ಕಂಪ್ಯೂಟರ್ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಯಾವುದೇ ಸುಳಿವು ಸಿಗದಂತೆ ಪರಾರಿಯಾಗುತ್ತಿದ್ದರು. ಕದ್ದ ವಸ್ತುಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದರು. ಅದನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಹುಳಿಮಾವು, ಫ್ರೇಜರ್ ಟೌನ್, ಹೆಣ್ಣೂರು, ರಾಜಾನುಕುಂಟೆ, ಕೋಣನಕುಂಟೆ, ಕೆ.ಆರ್.ಪುರ, ಬಾಗಲೂರು, ಕೋಲಾರ ಹಾಗೂ ದಾವಣಗೆರೆ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು. 22 ವರ್ಷಗಳಿಂದ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಜ್ಞಾನಭಾರತಿ ಪೊಲೀಸರ ವಿಶೇಷ ತಂಡ, ತಾಂತ್ರಿಕ ಸುಳಿವು ಆಧರಿಸಿ ಮೂವರನ್ನೂ ಬಂಧಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.