ADVERTISEMENT

ತಂದೆಗೆ ಅಪಘಾತವೆಂದು ಬಾಲಕಿಯ ನಂಬಿಸಿ ಕಳವು

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 20:36 IST
Last Updated 1 ಜೂನ್ 2019, 20:36 IST

ಬೆಂಗಳೂರು: ಕೆಲಸಕ್ಕೆ ಹೋಗಿದ್ದ ತಂದೆಗೆ ಅಪಘಾತವಾಗಿದೆ ಎಂದು ಸುಳ್ಳು ಹೇಳಿ ಅವರ ಮಗಳನ್ನು ನಂಬಿಸಿದ್ದ ಕಳ್ಳನೊಬ್ಬ, ಆಕೆಯ ಎದುರೇ ಮನೆಯಲ್ಲಿದ್ದ ಬೀರುವಿನ ಬಾಗಿಲು ತೆರೆದು ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ.

ಮೇ 23ರಂದು ಈ ಘಟನೆ ನಡೆದಿದೆ. ಈ ಸಂಬಂಧ ದೊಡ್ಡನೆಕ್ಕುಂದಿ ನಿವಾಸಿ ಸೋಮ ನಾಯ್ಕ ಎಂಬುವರು ಎಚ್‌ಎಎಲ್‌ ಠಾಣೆಗೆ ದೂರು ನೀಡಿದ್ದಾರೆ.

‘ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಸೋಮ ನಾಯ್ಕ ದಂಪತಿ, ಮಗಳ ಜೊತೆ ವಾಸವಿದ್ದಾರೆ. ಮೇ 23ರಂದು ಬೆಳಿಗ್ಗೆ ದಂಪತಿಯು ಕೆಲಸಕ್ಕೆ ಹೋಗಿದ್ದರು. ಮಗಳು ಮಾತ್ರ ಮನೆಯಲ್ಲಿದ್ದಳು’ ಎಂದು ಪೊಲೀಸರು ಹೇಳಿದರು.

ADVERTISEMENT

‘ದಂಪತಿ ಹೋದ ಕೆಲ ಗಂಟೆಗಳ ಬಳಿಕ ಮನೆಗೆ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ, ಪರಿಚಯಸ್ಥನಂತೆ ನಟಿಸಿ ಬಾಲಕಿಯನ್ನು ಮಾತನಾಡಿಸಿದ್ದ. ‘ನಿಮ್ಮ ತಂದೆಗೆ ಅಪಘಾತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಚಿಕಿತ್ಸೆಗೆ ಹಣ ಬೇಕಾಗಿದ್ದು, ಅದನ್ನು ತೆಗೆದುಕೊಂಡು ಬರುವಂತೆ ನನ್ನನ್ನು ಕಳುಹಿಸಿದ್ದಾರೆ’ ಎಂದು ಹೇಳಿದ್ದ.’

‘ವಿಷಯ ಕೇಳಿ ಗಾಬರಿಗೊಂಡಿದ್ದ ಬಾಲಕಿ, ಆರೋಪಿಯನ್ನು ಕೊಠಡಿಗೆ ಕರೆದೊಯ್ದು ಬೀರು ತೋರಿಸಿದ್ದಳು. ಅದರ ಬಾಗಿಲು ತೆರೆದಿದ್ದ ಆರೋಪಿ, 1 ಜೊತೆ ಕಿವಿ ಒಲೆ, ಉಂಗುರ ಸೇರಿದಂತೆ 30 ಗ್ರಾಂ ತೂಕದ ಚಿನ್ನಾಭರಣಗಳನ್ನು ಜೇಬಿಗೆ ಹಾಕಿಕೊಂಡು ಹೊರಟು ಹೋಗಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮಧ್ಯಾಹ್ನ 1 ಗಂಟೆ ಸುಮಾರಿಗೆ ತಾಯಿ ಮನೆಗೆ ಬಂದಾಗ ಬೀರುವಿನ ಬಾಗಿಲು ತೆರೆದಿತ್ತು. ಆ ಬಗ್ಗೆ ಮಗಳನ್ನು ವಿಚಾರಿಸಿದಾಗಲೇ ವಿಷಯ ಗೊತ್ತಾಗಿತ್ತು. ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.