ADVERTISEMENT

‘ಕೋಡ್’ ಮೂಲಕ ಕಳ್ಳತನ ಓಜಿಕುಪ್ಪಂ ಗ್ಯಾಂಗ್‌ ಬಲೆಗೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 20:30 IST
Last Updated 23 ಜನವರಿ 2022, 20:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ವಿವಿಧ ಬ್ಯಾಂಕ್‌ಗಳ ಬಳಿ ಸುತ್ತಾಡಿ ಗ್ರಾಹಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಓಜಿಕುಪ್ಪಂ ಗ್ಯಾಂಗ್ ಸದಸ್ಯರು ಕೊತ್ತನೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

‘ಬ್ಯಾಂಕ್ ಗ್ರಾಹಕರನ್ನು ಹಿಂಬಾಲಿಸಿ ಹಣ ಕದ್ದುಕೊಂಡು ಪರಾರಿಯಾಗುತ್ತಿದ್ದ ಆರೋಪದಡಿ ಗುರಿಕುಮಾರ್ ಹಾಗೂ ಷಣ್ಮುಗಂ ಎಂಬುವವರನ್ನು ಬಂಧಿಸಲಾಗಿದೆ. ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಓಜಿಗುಪ್ಪಂ ಗ್ಯಾಂಗ್‌ ಕಟ್ಟಿಕೊಂಡಿದ್ದ ಆರೋಪಿಗಳು, ಕೋಡ್ ಹಾಗೂ ಸನ್ನೆಗಳ ಮೂಲಕ ಕೃತ್ಯ ಎಸಗುತ್ತಿದ್ದರು. ಕೊತ್ತನೂರು, ಅಮೃತಹಳ್ಳಿ, ಯಲಹಂಕ, ಮಾರತ್ತಹಳ್ಳಿ ಹಾಗೂ ವಿವಿಧ ಠಾಣೆ ವ್ಯಾಪ್ತಿಯಲ್ಲಿ ಆರೋ‍ಪಿಗಳು ಕಳ್ಳತನ ಮಾಡಿರುವುದು ಗೊತ್ತಾಗಿದೆ’ ಎಂದೂ ತಿಳಿಸಿವೆ.

ADVERTISEMENT

ಕಾದು, ಹಿಂಬಾಲಿಸಿ ಕಳ್ಳತನ: ‘ನಿತ್ಯವೂ ಬ್ಯಾಂಕ್ ಬಳಿ ಆರೋಪಿಗಳು ಬರುತ್ತಿದ್ದರು. ಕೆಲವರು ಬ್ಯಾಂಕ್‌ನೊಳಗೆ ಹೋಗುತ್ತಿದ್ದರು. ಯಾರಾದರೂ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿ ಕೊಂಡು ಹೋಗುವುದು ಗೊತ್ತಾದರೆ, ಆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅಂಥ ಗ್ರಾಹಕರನ್ನು ಹಿಂಬಾಲಿಸಿ, ಗಮನ ಬೇರೆಡೆ ಹಣದ ಬ್ಯಾಗ್‌ ಕದ್ದುಕೊಂಡು ಪರಾರಿಯಾಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು
ಹೇಳಿವೆ.

‘ಆರೋಪಿಗಳು ಸನ್ನೆ ಮೂಲಕ ಮಾತನಾಡುತ್ತಿದ್ದರು. ತಲೆ ಮೇಲೆ ಕೈ ಇಟ್ಟರೆ ಎಚ್ಚರ ವಹಿಸುವಂತೆ ಹಾಗೂ ಮೂಗಿನ ಮೇಲೆ ಕೈ ಇಟ್ಟರೆ ಕಳ್ಳತನ ಮಾಡುವ ಸನ್ನೆ ಇವರದ್ದಾಗಿತ್ತು. ಇತ್ತೀಚೆಗೆ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ₹ 4 ಲಕ್ಷ ಕಳ್ಳತನ
ವಾಗಿತ್ತು. ಅದರ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು. ಕಳ್ಳತನ ಮಾಡುವುದೇ ಇವರ ವೃತ್ತಿ’ ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.