ADVERTISEMENT

20 ತೊಲೆ ಚಿನ್ನ, ₹ 20 ಲಕ್ಷ ನಗದು ಕಳವು

ಮನೆ ಮಾಲೀಕರ ವಿರುದ್ಧವೇ ಬಾಡಿಗೆದಾರರ ದೂರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:42 IST
Last Updated 25 ಜುಲೈ 2019, 19:42 IST

ಬೆಂಗಳೂರು: ಬೀರುವಿನಲ್ಲಿ ಇಟ್ಟಿದ್ದ 20 ತೊಲೆ ಚಿನ್ನಾಭರಣ ಮತ್ತು ₹ 20 ಲಕ್ಷ ಹಣವನ್ನು ಮನೆ ಮಾಲೀಕರೇ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಬಾಡಿಗೆದಾರರೊಬ್ಬರು ಸೋಲದೇವನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಸೋಲದೇವನಹಳ್ಳಿ ಮಸೀದಿ ಬಳಿ ನಿವಾಸಿ ಚಂದ್ರಕಲಾ ಎಂಬುವರು, ತಾನು ಬಾಡಿಗೆಯಲ್ಲಿದ್ದ ಮನೆ ಮಾಲೀಕರಾದ ರಾಜಮ್ಮ ಮತ್ತು ಪುಟ್ಟರಾಜು ಎಂಬುವವರ ವಿರುದ್ಧ ದೂರು ನೀಡಿದ್ದಾರೆ.

‘ರಾಜಮ್ಮ ಅವರ ಮನೆಯನ್ನು 2018ರ ಜೂನ್‌ 28ರಂದು ₹ 2.50 ಲಕ್ಷ ಭೋಗ್ಯಕ್ಕೆ ಪಡೆದಿದ್ದೆ. ಆದರೆ, ಆರೋಗ್ಯ ಸರಿ ಇಲ್ಲದೇ ಇದ್ದುದರಿಂದ ಅದೇ ವರ್ಷ ಜುಲೈ 7ರಂದು ಸ್ವಂತ ಊರಾದ ಆಂಧ್ರ ಪ್ರದೇಶಕ್ಕೆ ತೆರಳಿದ್ದೆ. ಒಂದು ವರ್ಷದ ಬಳಿಕ, 2019ರ ಜುಲೈ 20ರಂದು ಸಂಜೆ 7.30ಕ್ಕೆ ಮನೆಗೆ ವಾಪಸು ಬಂದಾಗ ಬೀರುವಿನ ಲಾಕ್‌ ಮತ್ತು ಮನೆಯ ಬೀಗ ಹೊರಗಡೆ ಬಿದ್ದಿತ್ತು. ಈ ಬಗ್ಗೆ ಮನೆ ಮಾಲೀಕರ ಬಳಿ ವಿಚಾರಿಸಿದಾಗ, ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿದ್ದಾರೆ’ ಎಂದು ದೂರಿನಲ್ಲಿ ಚಂದ್ರಕಲಾ ಆರೋಪಿಸಿದ್ದಾರೆ.

ADVERTISEMENT

‘ನಾನು ಹಾಕಿದ್ದ ಬೀಗವನ್ನು ಮನೆ ಮಾಲೀಕರೇ ಒಡೆದು, ಒಳಗಿದ್ದ ಚಿನ್ನಾಭರಣ, ನಗದು, ಸೋಪಾ, ಟಿ.ವಿ, ಬೆಳೆಬಾಳುವ ಸೀರೆಗಳನ್ನು ಕದ್ದುಕೊಂಡು ಹೋಗಿದ್ದಾರೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ‍ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.