ADVERTISEMENT

ರಾತ್ರಿ ವೇಳೆ ಶೂಗಳಿಗೆ ಕನ್ನ: ಬಂಧಿತರಿಂದ 715 ಜೊತೆ ಶೂ ಜಪ್ತಿ

ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ: ಬಂಧಿತರಿಂದ 715 ಜೊತೆ ಶೂ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:39 IST
Last Updated 19 ಜುಲೈ 2024, 14:39 IST
ಆರೋಪಿಗಳಿಂದ ಜಪ್ತಿ ಮಾಡಿದ ಶೂಗಳು ಹಾಗೂ ಆಟೊ 
ಆರೋಪಿಗಳಿಂದ ಜಪ್ತಿ ಮಾಡಿದ ಶೂಗಳು ಹಾಗೂ ಆಟೊ    

ಬೆಂಗಳೂರು: ಮನೆಯ ಎದುರು ಬಿಚ್ಚಿಟ್ಟಿದ್ದ ಶೂ, ಗ್ಯಾಸ್ ಸಿಲಿಂಡರ್ ಹಾಗೂ ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಂಗಾಧರ ಅಲಿಯಾಸ್ ಗಂಗ ಹಾಗೂ ಯಲ್ಲಪ್ಪ ಬಂಧಿತರು.

ಬಂಧಿತರಿಂದ ₹10.75 ಲಕ್ಷ ಮೌಲ್ಯದ 715 ಜೊತೆ ಶೂ, ಎರಡು ಗ್ಯಾಸ್ ಸಿಲಿಂಡರ್‌, ಎಲೆಕ್ಟ್ರಿಕ್‌ ವಾಹನದ ಒಂದು ಬ್ಯಾಟರಿ ಹಾಗೂ ಕಳವು ಮಾಡಿದ್ದ ವಸ್ತುಗಳನ್ನು ಸಾಗಿಸಲು ಬಳಸಿದ್ದ ಆಟೊ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.‌

ADVERTISEMENT

‘ಬಿಇಎಲ್‌ ಲೇಔಟ್‌ನ ವ್ಯಕ್ತಿಯೊಬ್ಬರು ಮನೆ ಎದುರು ಬಿಚ್ಚಿಟ್ಟಿದ ನಾಲ್ಕು ಜತೆ ಶೂ ಹಾಗೂ ಎರಡು ಗ್ಯಾಸ್‌ ಸಿಲಿಂಡರ್‌ ಅನ್ನು ಆರೋಪಿಗಳು ಕಳ್ಳತನ ಮಾಡಿದ್ದರು. ಆರೋಪಿಗಳು ಶೂ ರ್‍ಯಾಕ್‌ನಲ್ಲಿಟ್ಟಿದ್ದ ಶೂ ಅನ್ನು ಚೀಲದೊಳಗೆ ತುಂಬಿ ಪರಾರಿಯಾಗಿದ್ದ ದೃಶ್ಯ ಮನೆಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಜುಲೈ 15ರಂದು ಮನೆ ಮಾಲೀಕರು ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಆರೋಪಿಗಳು ರಾತ್ರಿ ವೇಳೆ ವಿವಿಧ ಬಡಾವಣೆಗಳಲ್ಲಿ ಸಂಚಾರ ನಡೆಸಿ ಬೆಲೆಬಾಳುವ ಶೂಗಳನ್ನು ಕಳ್ಳತನ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದರು.

ಏಳು ವರ್ಷದಿಂದ ಕೃತ್ಯ

ಆರೋಪಿಗಳು 2017ರಿಂದಲೂ ಶೂ ಕಳ್ಳತನ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ. ನಗರದ ಅಪಾರ್ಟ್‌ಮೆಂಟ್, ಮನೆಗಳ ಮುಂದೆ ಇಡುತ್ತಿದ್ದ ಬೆಲೆ ಬಾಳುವ ಶೂ, ಚಪ್ಪಲಿಗಳನ್ನು ಕದ್ದು ಸಂಡೆ ಬಜಾರ್, ಊಟಿಯಲ್ಲಿ ಮಾರಾಟ ಮಾಡುತ್ತಿದ್ದರು. ಪಾದರಕ್ಷೆ ಹಾಗೂ ಶೂ ಕದ್ದರೆ ಸಾಮಾನ್ಯವಾಗಿ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿ ದೂರು ನೀಡುವುದಿಲ್ಲ ಎಂಬುದನ್ನು ಅರಿತಿದ್ದ ಆರೋಪಿಗಳು, ಇದೇ ಕಾರಣಕ್ಕೆ ಪಾದರಕ್ಷೆ, ಶೂ ಕಳ್ಳತನಕ್ಕೆ ಇಳಿದಿದ್ದರು. ಕದ್ದ ಶೂ, ಚಪ್ಪಲಿಗಳನ್ನು ಶುಚಿಗೊಳಿಸಿ ಮಾರಾಟ ಮಾಡುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.  

ಕಳವು ಮಾಡಿದ್ದ ಶೂ ಹಾಗೂ ಪಾದರಕ್ಷೆಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.