ADVERTISEMENT

ರಾಜ್ಯದಲ್ಲಿ ಸದ್ಯಕ್ಕಿಲ್ಲ ಪ್ಲಾಸ್ಮಾ ಚಿಕಿತ್ಸೆ

ತೀವ್ರ ನಿಗಾ ಘಟಕದಲ್ಲಿರುವ ರೋಗಿಗಳು ಚಿಕಿತ್ಸೆಗೆ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2020, 22:11 IST
Last Updated 30 ಏಪ್ರಿಲ್ 2020, 22:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ತೀವ್ರ ನಿಗಾ ಘಟಕದಲ್ಲಿರುವ (ಐಸಿಯು) ಕೋವಿಡ್ ರೋಗಿಗಳು ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಾಯೋಗಿಕ ನಡೆಸಲು ಉದ್ದೇಶಿಸಿದ್ದ ಪ್ಲಾಸ್ಮಾ ಚಿಕಿತ್ಸೆಯನ್ನು ಮುಂದೂಡಲಾಗಿದೆ.

ಸದ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿರುವ 314 ವ್ಯಕ್ತಿಗಳಲ್ಲಿ 9 ಮಂದಿ ಐಸಿಯು ನಲ್ಲಿ ಇದ್ದಾರೆ. ಈ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರ ಕೆಲ ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿತ್ತು.ಡ್ರಗ್‌ ಕಂಟ್ರೋಲರ್ ಜನರಲ್ ಆಫ್‌ ಇಂಡಿಯಾ (ಡಿಸಿಜಿಐ) ಅನುಮತಿ ಪಡೆದು, ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಮತ್ತು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಈಗಾಗಲೇ ಇಬ್ಬರು ರೋಗಿಗಳ ಪ್ಲಾಸ್ಮಾವನ್ನೂ ಪಡೆದುಕೊಳ್ಳಲಾಗಿದೆ. ಆದರೆ, ಒಂದೆಡೆ ರೋಗಿಗಳು ನಿಯಮಿತ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೇ, ಇನ್ನೊಂದೆಡೆ ಪ್ಲಾಸ್ಮಾ ಚಿಕಿತ್ಸೆ ಕೇವಲ ವೈದ್ಯಕೀಯ ಪ್ರಯೋಗಗಳಿಗೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ವೈದ್ಯರು ಹಿಂದೇಟು ಹಾಕಿದ್ದಾರೆ.

‘ಸಂಗ್ರಹಿಸಲ್ಪಟ್ಟ ಪ್ಲಾಸ್ಮಾವನ್ನು ಒಂದು ವರ್ಷದವರೆಗೂ ಸುರಕ್ಷಿತವಾಗಿ ಇಡಬಹುದು. ರೋಗಿಗಳ ಆರೋಗ್ಯದ ಸ್ಥಿತಿ ಹಾಗೂ ಕೇಂದ್ರ ಸರ್ಕಾರ ನೀಡುವ ಸೂಚನೆ ಅನುಸಾರ ಚಿಕಿತ್ಸೆ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಯಾವುದೇ ರೋಗಿಗೆ ಈ ಚಿಕಿತ್ಸೆ ಅಗತ್ಯವಿಲ್ಲ. ರೋಗಿಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಹೆಸರು ಬಹಿರಂಗಕ್ಕೆ ಒಪ್ಪದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ADVERTISEMENT

ರೋಗಿಗಳ ಜೀವ ಉಳಿಸಿ: ದಾನಿಯ ಮನವಿ
‘ವೈದ್ಯರು ನೀಡಿದ ಚಿಕಿತ್ಸೆಯಿಂದ ನಾವು ಗುಣಮುಖರಾಗಿದ್ದೇವೆ. ಆದರೆ, ಕೆಲವರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಅಂತವರಿಗೆ ಪ್ಲಾಸ್ಮಾ ಚಿಕಿತ್ಸೆ ವರದಾನ ಎಂದು ಹೇಳಲಾಗುತ್ತಿದೆ. ಹಾಗಾಗಿ ಗುಣಮುಖರಾದವರು ಸ್ವಯಂಪೇರಿತರಾಗಿ ರಕ್ತದಾನಕ್ಕೆ ಮುಂದೆ ಬರೆಬೇಕು’ ಎಂದು 40 ವರ್ಷದ ಪ್ರಥಮ ಪ್ಲಾಸ್ಮಾ ದಾನಿ ಮನವಿ ಮಾಡಿಕೊಂಡಿದ್ದಾರೆ.

‘ನನ್ನ ತಾಯಿ ವೈದ್ಯೆ ಹಾಗೂ ತಂದೆ ನಿವೃತ್ತ ಯೋಧ. ಸಾಮಾಜಿಕ ಸೇವೆಯಲ್ಲಿ ಮೊದಲಿನಿಂದಲೂ ಆಸಕ್ತಿಯಿದೆ. ಆದ್ದರಿಂದ ಮನೆಗೆ ತೆರಳಿದ ಬಳಿಕವೂ ಈ ಸೋಂಕು ನಿವಾರಣೆಗೆ ನಡೆಯುತ್ತಿರುವ ಸಂಶೋಧನೆ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳುತ್ತಿದೆ. ರಾಜ್ಯದಲ್ಲಿಯೂ ಪ್ಲಾಸ್ಮಾ ಚಿಕಿತ್ಸೆ ಮಾಡಲಾಗುತ್ತದೆ ಎನ್ನುವುದು ಸಾಮಾಜಿಕ ಜಾಲತಾಣದ ಮೂಲಕ ತಿಳಿಯಿತು. ಬಳಿಕ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ಅವರನ್ನು ಸಂಪರ್ಕಿಸಿದೆ. ಅವರು ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿ, ಪ್ಲಾಸ್ಮಾ ದಾನದ ಮಹತ್ವ ತಿಳಿಸಿದರು. ಹಾಗಾಗಿ ಸ್ವಯಂಪ್ರೇರಿತನಾಗಿ ರಕ್ತ ದಾನ ಮಾಡಲು ಮುಂದೆ ಬಂದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.