ADVERTISEMENT

ಕಳ್ಳರ ಬಂಧನ: ₹40 ಲಕ್ಷ ಮೌಲ್ಯದ ಆಭರಣ, ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:58 IST
Last Updated 9 ಮೇ 2025, 15:58 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಕಬ್ಬಿಣದ ರಾಡ್‌, ಕಟರ್‌, ಸ್ಕ್ರೂ ಡ್ರೈವರ್ ಬಳಸಿ ಮನೆ ಕಳ್ಳತನ ಮಾಡುತ್ತಿದ್ದ ಹಾಗೂ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಂಪಂಗಿರಾಮನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಗೊಲ್ಲರಹಟ್ಟಿ ಕೊಡಿಗೇಹಳ್ಳಿ ಲೇಔಟ್‌ನ ಅಶೋಕ ಅಲಿಯಾಸ್‌ ‘ಆ್ಯಪಲ್‌’(34) ಹಾಗೂ ತುಮಕೂರಿನ ಚಿಕ್ಕಪೇಟೆಯ ರೇಣುಕಾ ಪ್ರಸಾದ್‌ (31) ಬಂಧಿತರು.

ಬಂಧಿತರಿಂದ ₹40 ಲಕ್ಷ ಮೌಲ್ಯದ 384 ಗ್ರಾಂ. ಚಿನ್ನಾಭರಣ, 108 ಗ್ರಾಂ. ಬೆಳ್ಳಿಯ ಸಾಮಗ್ರಿ, ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ 11 ದಿನ ಪೊಲೀಸ್‌ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಠಾಣಾ ವ್ಯಾಪ್ತಿಯ ಒಕ್ಕಲಿಗರ ಭವನದ ಬಳಿ ಇಬ್ಬರು ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದರು. ಗಸ್ತಿನಲ್ಲಿದ್ದ ಪೊಲೀಸರು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದು ಗೊತ್ತಾಗಿತ್ತು.

ಕಳವು ಮಾಡಿದ್ದ ದ್ವಿಚಕ್ರ ವಾಹನಗಳನ್ನು ಆರೋಪಿಗಳು ಮನೆ ಕಳ್ಳತನ ಮಾಡಲು ಬಳಸುತ್ತಿದ್ದರು. ಬ್ಯಾಡರಹಳ್ಳಿ ಭರತ್‌ನಗರದ ಎರಡು ಮನೆಗಳಲ್ಲಿ ಮೊದಲ ಆರೋಪಿ ಅಶೋಕ್‌ ಚಿನ್ನ ಹಾಗೂ ಬೆಳ್ಳಿಯ ಆಭರಣ ಕಳ್ಳತನ ಮಾಡಿದ್ದ. ಇನ್ನೊಬ್ಬ ಆರೋಪಿ ಚಂದ್ರಾಲೇಔಟ್‌ನಲ್ಲಿ ದ್ವಿಚಕ್ರ ವಾಹನ ಕದ್ದಿದ್ದ. ಕದ್ದ ವಾಹನಗಳನ್ನು ಗೋವಿಂದರಾಜನಗರದ ಪಟ್ಟೇಗಾರ ಪಾಳ್ಯದ ರಸ್ತೆಬದಿಯ ಖಾಲಿ ಪ್ರದೇಶದಲ್ಲಿ ನಿಲುಗಡೆ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

‘ಚಿನ್ನ–ಬೆಳ್ಳಿ ಕೆಲಸ ಮಾಡುವ ವ್ಯಕ್ತಿಗೆ ಕದ್ದ ಚಿನ್ನವನ್ನು ಆರೋಪಿಗಳು ಮಾರಾಟ ಮಾಡಿದ್ದರು. ಸ್ವಲ್ಪ ಚಿನ್ನವನ್ನು ಕಾರಿನಲ್ಲಿ ಬಚ್ಚಿಟ್ಟಿದ್ದರು. ಅಲ್ಲಿಂದ ಚಿನ್ನವನ್ನು ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಇಬ್ಬರು ಆರೋಪಿಗಳ ಬಂಧನದಿಂದ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎರಡು, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆ ಹಾಗೂ ಚಂದ್ರಾಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಪ್ರಕರಣಗಳ ಪತ್ತೆಯಾಗಿವೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.