ADVERTISEMENT

24 ವರ್ಷದ ಬಳಿಕ ತಿಪ್ಪಗೊಂಡನಹಳ್ಳಿ ಜಲಾಶಯ ಭರ್ತಿ

ಹೆಸರಘಟ್ಟದಲ್ಲಿ ದಾಖಲೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 22:36 IST
Last Updated 5 ಸೆಪ್ಟೆಂಬರ್ 2022, 22:36 IST
ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಗೇಟ್‌ ತೆರೆದು ನೀರು ಹರಿಸಲಾಗುತ್ತಿದೆ
ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಗೇಟ್‌ ತೆರೆದು ನೀರು ಹರಿಸಲಾಗುತ್ತಿದೆ   

ಬೆಂಗಳೂರು: ನಗರಕ್ಕೆ ಮೊದಲ ಬಾರಿಗೆ ನೀರು ಕೊಟ್ಟ ಜಲಾಶಯಗಳಲ್ಲಿ ಒಂದಾದ ತಿಪ್ಪಗೊಂಡನ ಹಳ್ಳಿ ಜಲಾಶಯ 24 ವರ್ಷದ ನಂತರ ಸಂಪೂರ್ಣ ತುಂಬಿದ್ದು, ಗೇಟ್‌ಗಳನ್ನು ತೆರೆದು ನೀರು ಹೊರಬಿಡಲಾಗಿದೆ. ಹೆಸರಘಟ್ಟ ಜಲಾಶಯ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹ ಕಂಡಿದೆ.

ತಿಪ್ಪಗೊಂಡಹಳ್ಳಿ ಜಲಾಶಯ 1998ರಲ್ಲಿ ತುಂಬಿದ ನಂತರ ಬೃಹತ್‌ ನೀರಿನ ಹರಿವು ಕಂಡಿರಲಿಲ್ಲ. ಒಂದು ವಾರದಿಂದೀಚೆಗೆ ಅರ್ಕಾವತಿ ನದಿ ಹಾಗೂ ಅದರ ಉಪನದಿ ಕುಮುದ್ವತಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗಿದ್ದರಿಂದ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ಜಲಾಶಯ 70 ಅಡಿ ನೀರಿನ ಸಂಗ್ರಹವನ್ನು ಸೋಮವಾರ ತಲುಪಿದೆ.

ಜಲಾಶಯದ ಒಟ್ಟಾರೆ ಸಂಗ್ರಹದ 74 ಅಡಿಯಾಗಿದ್ದರೂ, 70 ಅಡಿಯ ಮೇಲಿನ ಸಂಗ್ರಹ ಕಾರ್ಯಸಾಧುವಲ್ಲ ಎಂದು ನೀರನ್ನು ಹೊರಹರಿಸಲಾಗುತ್ತಿದೆ. ಬೆಂಗಳೂರು, ಶಿವಗಂಗೆ ಭಾಗದಿಂದ ನೀರಿನ ಅರಿವು ಹೆಚ್ಚಾಗಿದೆ. ಹೀಗಾಗಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ADVERTISEMENT

ಮಳೆಗಾಲದ ಅಂತ್ಯ ಹಾಗೂ ನಂತರದ ತಿಂಗಳಲ್ಲಿ ಹೆಚ್ಚಿನ ಮಳೆಯಾದ ನಂತರ ಸುಮಾರು 60 ಅಡಿಯಷ್ಟು ನೀರನ್ನು ತಿಪ್ಪಗೊಂಡನಹಳ್ಳಿ ಜಲಾಶಯ ಕಾಣುತ್ತಿತ್ತು. ಆದರೆ ಈ ಬಾರಿ ಸೆಪ್ಟೆಂಬರ್‌ ಮೊದಲ ವಾರದಲ್ಲೇ ತುಂಬಿಹೋಗಿದೆ. ತಿಪ್ಪಗೊಂಡನಹಳ್ಳಿಯಿಂದ ಬೆಂಗಳೂರು ನಗರಕ್ಕೆ ದಶಕದ ನಂತರ ಕುಡಿಯುವ ನೀರು ಪೂರೈಕೆ ಯೋಜನೆ ಮುಂದಿನ ಮಾರ್ಚ್‌ನಲ್ಲಿ ಸಾಕಾರಗೊಳ್ಳುವ ನಿರೀಕ್ಷೆ ಇದೆ.

ಇನ್ನು ನಾಲ್ಕು ದಶಕಗಳಿಂದ ನೀರನ ಸಂಗ್ರಹ ಕಾಣದೆ, ಅರ್ಕಾವತಿ ನದಿಯ ಹರಿವನ್ನೇ ಅವಲಂಬಿಸಿರುವ ಹೆಸರಘಟ್ಟ ಜಲಾಶಯವೂ ದಾಖಲೆ ಪ್ರಮಾಣದಲ್ಲಿ ನೀರಿನ ಸಂಗ್ರಹ ಕಂಡಿದೆ. 71 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಹೆಸರಘಟ್ಟದಲ್ಲಿ ಸೋಮವಾರ ಸಂಜೆ 62 ಅಡಿ ನೀರು ದಾಖಲಾಗಿದೆ. ಇಷ್ಟೊಂದು ನೀರಿನ ಸಂಗ್ರಹ 40 ವರ್ಷಗಳಿಂದೀಚಿಗೆ ಇದೇ ಮೊದಲು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ದೊಡ್ಡಬಳ್ಳಾಪುರ, ಚಿಕ್ಕಬಳ್ಳಾ ಪುರದ ನಂದಿ ಭಾಗದಲ್ಲಿ ಮಳೆ ಹೆಚ್ಚಾದರೆ, ಕೆಲವೇ ದಿನಗಳಲ್ಲಿ ಹೆಸರಘಟ್ಟ ಕೂಡ ಕೋಡಿ ಬೀಳುವ ಸಾಧ್ಯತೆ ಇದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದರು.

ನದಿಪಾತ್ರಕ್ಕೆ ನೀರು: ಎಚ್ಚರಿಕೆ

ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಿದ್ದು, ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಗೇಟ್‌ಗಳನ್ನು ತೆರೆದು ನೀರನ್ನು ಅರ್ಕಾವತಿ ನದಿಗೆ ಹರಿಸಲಾಗುತ್ತಿದೆ. ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ರಾಮನಗರ ಜಿಲ್ಲಾಧಿಕಾರಿಯವರಿಗೆ ಜಲಮಂಡಳಿ ಕಾವೇರಿ–ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.